ಯಾಕೋ ಶಿವರಾಮ ಕಾರಂತರು ನೆನಪಾಗುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ನಮ್ಮ ರಾಜ್ಯದ ಪರಿಸರ ರಕ್ಷಿಸಲು ಅವರು ಒಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಉತ್ತರಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕೈಗಾ ಯೋಜನೆಯಿಂದಾಗಿ ರಾಜ್ಯದ ಪರಿಸರಕ್ಕೆ ಹಾನಿಯುಂಟಾಗುವುದನ್ನು ಪ್ರತಿಭಟನೆಯ ಮೂಲಕ ಮೇಲಿನವರ ಗಮನಕ್ಕೆ ತಂದರು. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದ ಕಾರಂತರು, ತಮ್ಮ ಪರಿಸರ ಕಾಳಜಿಯನ್ನು ಸಾರ್ವಜನಿಕವಾಗಿ ಅಂದು ವ್ಯಕ್ತ ಪಡಿಸಿದ ರೀತಿ ಅಭೂತಪೂರ್ವ. ಈ ರೀತಿ ಪ್ರತಿಭಟನೆ ಮಾಡಿದರೆ ಆಳುವವರಿಗೆ, ಅಕಾಡೆಮಿಗಳಿಗೆ ಬೇಸರವಾಗುತ್ತದೆ ಎಂದು ಅವರು ಹಿಂಜರಿಕೆಯಿಂದ ಮನೆಯೊಳಗೇ ಕುಳಿತರಲಿಲ್ಲ! ಬೇರಾವುದೇ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಯು ಸಾರ್ವಜನಿಕವಾಗಿ ಈ ರೀತಿಯ ಪರಿಸರ ಪ್ರೇಮವನ್ನು ತೋರಿಲ್ಲ. ಶಿವರಾಮ ಕಾರಂತರ ಆ ಪ್ರತಿಭಟನೆಯು ರಾಜ್ಯವ್ಯಾಪಿ ಪ್ರಚಾರ ಪಡೆದು ಅದಷ್ಟೋ ಯುವಜನರಿಗೆ, ಮಕ್ಕಳಿಗೆ ಪರಿಸರದ ಪ್ರಾಮುಖ್ಯತೆಯನ್ನು ಮನನಮಾಡಿಸಿತು. ನಮ್ಮ ಕಾಡುಗಳು, ನದಿಗಳು, ವನ್ಯಜೀವಿಗಳು ಉಳಿದುಕೊಂಡರೆ ಮಾತ್ರ ನಮ್ಮ ಬದುಕಿಗೆ ಅರ್ಥ, ಇಲ್ಲವಾದಲ್ಲಿ ಇಡೀ ನಾಡನ್ನು ನಾವು ಮರುಭೂಮಿಯನ್ನಾಗಿ ಪರಿವರ್ತಿಸಲು ಹೊರಟರೆ, ನಮ್ಮ ಬದುಕಿಗೆಲ್ಲಿ ಅರ್ಥ? ಕೈಗಾ ಯೋಜನೆಯನ್ನು ವಿರೋಧಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಂತರ ಆಶಯ ಇದೇ ತಾನೆ!

ಈಗ ಮೇಕೆದಾಟು ಯೋಜನೆಗೆ ದೊರೆಯುತ್ತಿರುವ ಪ್ರಚಾರ, ಪ್ರಾಮುಖ್ಯತೆ, ಹೈಪ್, ಅನಗತ್ಯ ವಿವಾದದ ಪ್ರಭಾವಳಿಯನ್ನು ಕಂಡಾಗ ಮನಸ್ಸು ಪಿಚ್ ಎನಿಸುತ್ತದೆ. ಈ ಮೇಕೆದಾಟು ಯೋಜನೆಯು ಮೂಲತಃ ಪರಿಸರ ವಿರೋಧಿ. ನಮ್ಮ ನಾಡಿನಲ್ಲಿ ಬಹು ಕಷ್ಟದಿಂದ ಉಳಿದುಕೊಂಡಿರುವ ಕೆಲವೇ ಪ್ರಾಕೃತಿಕ ತಾಣಗಳಲ್ಲಿ, ಕಾಡುಗಳಲ್ಲಿ ಕಾವೇರಿ ಕೊಳ್ಳದ ಕಾಡು, ಅದರ ಸುತ್ತಲಿನ ಅರಣ್ಯವೂ ಒಂದು. ಅಳಿದುಳಿದಿರುವ ಕಾಡುಗಳನ್ನು ನಾಶಪಡಿಸುವಲ್ಲಿ ಅಧಿಕಾರ ಹಿಡಿದವರು ಸದಾ ಮುಂದು ಎಂಬುದಕ್ಕೆ ಮತ್ತೊಂದು ಉದಾಹರಣೆ ಮೇಕೆದಾಟು ಯೋಜನೆ. ಒಂದೆರಡು ವರ್ಷಗಳ ಮುಂಚೆ, ದೂರದ ಶರಾವತಿ ನದಿಯಿಂದ, ಗುರುತ್ವ ಶಕ್ತಿಯ ವಿರುದ್ಧವಾಗಿ, ಅಪಾರ ಹಣ ವೆಚ್ಚ ಮಾಡಿ, `ಬೆಂಗಳೂರಿಗೆ ಕುಡಿಯುವ ನೀರನ್ನು’ ತರುವಂತಹ ಯೋಜನೆಗೂ ಇಂತಹ ಪ್ರಚಾರ ನೀಡಲಾಗಿತ್ತು. ತಮ್ಮದೇನೂ ಸ್ವಾರ್ಥವಿಲ್ಲ, ಬೆಂಗಳೂರಿನ ಜನರ ದಾಹ ತಣಿಸಲು ಈ ಯೋಜನೆ ಅಗತ್ಯ ಎಂದು ಬಿಂಬಿಸಲಾಗಿತ್ತು.
ಅದಕ್ಕಾಗಿ ನೂರಾರು ಹೆಕ್ಟೇರ್ ಅರಣ್ಯ ನಾಶ, ಪ್ರಾಣಿಗಳ ಕಾರಿಡಾರ್ ನಾಶ ಮೊದಲಾದ ಪರಿಸರವಿರೋಧಿ ಚಟುವಟಿಕೆಗಳು ಆ ಯೋಜನೆಯ ಅವಿಭಾಜ್ಯ ಅಂಗಗಳಾಗಿದ್ದವು. ಅದೇಕೋ, ಸದ್ಯ ಶರಾವತಿಯಿಂದ ಬೆಂಗಳೂರಿನ ದಾಹ ತಣಿಸುವ ಆಶಯವು ಹಿನ್ನೆಲೆಆಗೆ ಸರಿದಿದೆ. ಈಗ ಮೇಕೆದಾಟು ಯೋಜನೆಯನ್ನು ಮುನ್ನೆಲೆಗೆ ತಂದು `ಬೆಂಗಳೂರಿಗೆ ಕುಡಿಯುವ ನೀರು’ ನೀಡಲು ಈ ಯೋಜನೆ ಅಗತ್ಯ ಎಂಬ ಪ್ರಚಾರ ನಡೆದಿದೆ.ತುಸು ವಿಷಯಾಂತರ ಮಾಡುತ್ತೇನೆ. ಈ ವನ್ಯಜೀವಿಗಳ ಪಟ್ಟಿ ಗಮನಿಸಿ – ನೀರು ನಾಯಿ, ಮಲಬಾರ್ ಅಳಿಲು, ಗಿಜಲ್ಡ್ ದೈತ್ಯ ಅಳಿಲು (ಅಳಿವಿನಂಚಿನಲ್ಲಿರುವ ಜೀವಿ), ಹನಿ ಬ್ಯಾಜರ್, ಕಾಡು ಕುರಿ, ಜಿಂಕೆ, ಚಿರತೆ, ಕಾಡುಹಂದಿ, ಹುಲಿ, ಆನೆ .. (ಪಟ್ಟಿ ಅಪೂರ್ಣ). ಇವೆಲ್ಲವೂ, ಜತೆಗೆ ಇನ್ನಷ್ಟು ವನ್ಯ ಜೀವಿಗಳು, ಸರಿಸೃಪಗಳು, ಹಕ್ಕಿಗಳು, ಮೀನುಗಳು ಕಾವೇರಿ ಅಭಯಾರಣ್ಯದಲ್ಲಿ ವಾಸಿಸುತ್ತಿವೆ. ನಮ್ಮ ಯೋಜಕರು ಈಗ ಮೇಕೆದಾಟು ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಿರುವುದು ಇದೇ ಕಾವೇರಿ ಅಭಯಾರಣ್ಯದಲ್ಲಿ.

ಮೇಕೆದಾಟು ಕಾಮಗಾರಿಗೆ ಅಧಿಕೃತವಾಗಿ ಸುಮಾರು ೫,೦೦೦ ಹೆಕ್ಟೇರ್ ಜಾಗ ಬೇಕಾಗಿದ್ದು, ಅದರಲ್ಲಿ ಸುಮಾರು ೩,೧೮೧ ಹೆಕ್ಟೇರ್ ಭೂಮಿಯು ಕಾವೇರಿ ಅಭಯಾರಣ್ಯದಲ್ಲಿದೆ; ಸುಮಾರು ೧,೯೦೦ ಹೆಕ್ಟೇರ್ ಭೂಮಿಯು ಅದಕ್ಕೆ ತಾಗಿಕೊಂಡ ಅರಣ್ಯ ಪ್ರದೇಶ. ಈ ಉದ್ದೇಶಿತ ಡ್ಯಾಂ ನಿರ್ಮಾಣಗೊಂಡರೆ, ಇಷ್ಟೊಂದು ವಿಶಾಲವಾದ ಕಾಡು ಮುಳುಗಿಹೋಗುತ್ತದೆ. ಜತೆಗೆ, ಕಾಮಗಾರಿಗೆ ಅಗತ್ಯವಾದ ರಸ್ತೆಗೆ, ಗೋಡೌನ್‌ಗೆ, ಸಾಮಗ್ರಿ ಡಂಪ್ ಮಾಡಲು, ಕೆಲಸಗಾರರ ವಾಸಸ್ಥಳಕ್ಕಾಗಿ ಇನ್ನಷ್ಟು ಕಾಡು ನಾಶವಾಗುತ್ತದೆ. ಅಂದರೆ ಮೇಕೆದಾಟು ಯೋಜನೆಯಿಂದಾಗಿ ಅಧಿಕೃತವಾಗಿ ಸುಮಾರು ೫,೦೦೦ ಹೆಕ್ಟೇರ್ ಕಾಡು ಮತ್ತು ಅನಧಿಕೃತವಾಗಿ ಇನ್ನಷ್ಟು ಕಾಡು – ಒಟ್ಟು ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ನಿರ್ನಾಮಗೊಳ್ಳುತ್ತದೆ.ನಮ್ಮ ರಾಜ್ಯದ ದಕ್ಷಿಣ ತುದಿಯಲ್ಲಿರುವ ಈ ಅಭಯಾರಣ್ಯಕ್ಕೆ ತಾಗಿಕೊಂಡು, ತಮಿಳುನಾಡಿನ ಭಾಗದಲ್ಲೂ `ಕಾವೇರಿ ಉತ್ತರ ಅಭಯಾರಣ್ಯ’ವನ್ನು ರೂಪಿಸಲಾಗಿದೆ. ಇವೆರಡೂ ಅಭಯಾರಣ್ಯಗಳು ಒಟ್ಟಾಗಿ ಅವೆಷ್ಟೋ ಆನೆಗಳಿಗೆ, ಜಿಂಕೆಗಳಿಗೆ, ಹುಲಿಗಳಿಗೆ, ಚಿರತೆಗಳಿಗೆ ಮತ್ತಿತರ ಜೀವಿಗಳಿಗೆ ಆಶ್ರಯ ನೀಡಿದ್ದರ ಜತೆ, ಸುರಕ್ಷಿತ ಕಾರಿಡಾರ್ ಒದಗಿಸಿವೆ. ಮೇಕೆದಾಟು ಯೋಜನೆ ಪೂರ್ಣಗೊಂಡಾಗ, ಈ ವನ್ಯಜೀವಿ ಕಾರಿಡಾರ್ನ ಸ್ವರೂಪಕ್ಕೆ ಧಕ್ಕೆ ಬರುವುದರಲ್ಲಿ ಸಂದೇಹ ಉಂಟೆ? ತಮ್ಮ ದಾರಿ, ವಾಸಸ್ಥಳ ಮುಳುಗಿಹೋದರೆ, ಆ ಆನೆಗಳು, ಚಿರತೆಗಳು ಏನುತಾನೆ ಮಾಡಿಯಾವು? ಜನವಸತಿ ಪ್ರದೇಶಕ್ಕೆ ನುಗ್ಗಿ ದಾಂಧಲೆ ಮಾಡಿಯಾವು! ಈಗ ಆನೆಕಲ್, ರಾಮನಗರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆಗಾಗ ಕಂಡುಬರುವ ಆನೆ ಹಿಂಡುಗಳು ಬೆಳೆಯನ್ನು ನಾಶಪಡಿಸಿದಂತೆಯೇ, ಅಲ್ಲಿಂದ ಬರಬಹುದಾದ ಇನ್ನಷ್ಟು ಜೀವಿಗಳು ಜನರ ನಿದ್ದೆ ಕೆಡಿಸುವುದಿಲ್ಲವೆ? ಅಷ್ಟಕ್ಕೂ, ಈಗ ಉಳಿದುಕೊಂಡಿರುವ ಅಪರೂಪದ ಅರಣ್ಯಗಳಲ್ಲಿ ಒಂದಾದ ಮೇಕೆದಾಟು ಪ್ರದೇಶದಲ್ಲಿ ಇಂತಹ ಪರಿಸರ ವಿರೋಧಿ ಯೋಜನೆಯನ್ನು ಯಾಕಾದರೂ ಕೈಗೆತ್ತಿಕೊಳ್ಳಬೇಕು?
ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ತರುತ್ತಿದ್ದೇವೆ, ಜನರ ದಾಹ ತಣಿಸುವ ಯೋಜನೆಯಿದು ಎಂದು ಬಿಂಬಿಸುತ್ತಿರುವ ರಾಜಕೀಯ ಪಕ್ಷಗಳ ಘೋಷಣೆಯು ಜನರನ್ನು ತಪ್ಪುದಾರಿಗೆಳೆಯುವಂತಹದ್ದು. ಸುಮಾರು ೯,೦೦೦ ಕೋಟಿ ರೂಪಾಯಿಗಳ ಈ ಯೋಜನೆ ಪೂರ್ಣಗೊಂಡಾಗ ಬೆಂಗಳೂರಿನ `ದಾಹ’ ತಣಿಯುತ್ತದೆಯೆ? ಖಂಡಿತಾ ಇಲ್ಲ! ಬೆಂಗಳೂರು ಬೆಳೆಯುತ್ತಲೇ ಇದೆ, ಈಗಿನ ಬೆಳವಣಿಗೆಯ ವೇಗಕ್ಕೆ ತಡೆ ಬಾರದಿದ್ದರೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಹಾಗಿದ್ದಾಗ ಬೆಂಗಳೂರಿನ ಜಲದಾಹಕ್ಕೆ ಕೊನೆ ಎಲ್ಲಿ? ನಿರಂತರವಾಗಿ ಬೆಳೆಯತ್ತಿರುವ ಈ ಮಹಾನಗರದ ದಾಹ ತಣಿಸಲು ಮೇಕೆದಾಟು ಪ್ರದೇಶದ ಅರಣ್ಯವನ್ನು ನಾಶಪಡಿಸಿ, ನೀರನ್ನು ತರುವುದು ಸಂಪೂರ್ಣ ಅವೈಜ್ಞಾನಿಕ. ಅಣೆಕಟ್ಟಿನಿಂದಾಗಿ ಮುಳುಗಿ ಹೋಗುವ ಅರಣ್ಯ ಮತ್ತು ಮರಗಳ ಮೌಲ್ಯವನ್ನು ಲೆಕ್ಕಹಾಕಿದರೆ, ಬೆಂಗಳೂರಿಗೆ ಅಲ್ಲಿನ ನೀರನ್ನು ತರಲು ಉದ್ದೇಶಿಸಿರುವುದು ಅದೆಷ್ಟು ಅಸಮಂಜಸ ಎಂಬುದು ಅರಿವಾದೀತು.

ಅಂದ ಹಾಗೆ, ಬೆಂಗಳೂರಿನ ಜನರು `ಕುಡಿಯುವ ನೀರಿಗಾಗಿ ಈ ಯೋಜನೆ’ ಎಂದು ಹೇಳುವುದೇ ಅಸಮಂಜಸ ಎಂದು ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಸಾಕಷ್ಟು ಮಳೆಯಾಗುವ ಪ್ರದೇಶ. ಇಲ್ಲಿ ಸುರಿವ ಮಳೆ ನೀರನ್ನು ಇಲ್ಲೇ ಸಂಗ್ರಹಿಸಿದರೆ, ಸುಮಾರು ೧೫ ಟಿಎಂಸಿ ನೀರು ಲಭ್ಯ್ಯವಿದೆ! ಜತೆಗೆ ಬೆಂಗಳೂರಿನಂತಹ ಮಹಾನಗರದಲ್ಲಿ ವ್ಯಾಪಕವಾಗಿ ಕೈಗೊಳ್ಳಬೇಕಾದ ಇನ್ನೊಂದು ಕಾರ್ಯವಿದೆ – ಇದನ್ನು ಸಿಂಗಪುರ, ಕೇಪ್‌ಟೌನ್ ಮೊದಲಾದ ಜಗತ್ತಿನ ಪ್ರಸಿದ್ಧ ನಗರಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಕೈಗೊಳ್ಳಲಾಗಿದೆ – ಅದೇ, ಬಳಸಿದ ನೀರಿನ ಮರುಬಳಕೆ. ಈ ನಗರದ ಒಂದು ಕೋಟಿಗೂ ಮಿಕ್ಕ ಜನರು ಉಪಯೋಗಿಸಿದ ನೀರನ್ನು ಸೂಕ್ತವಾಗಿ ಸಂಸ್ಕರಿಸಿ, ಮರುಬಳಕೆ ಮಾಡಿದರೆ, ಕನಿಷ್ಠ ೧೫ ಟಿಎಂಸಿ ನೀರು ಲಭ್ಯ. ಈ ನೀರನ್ನು ಪಾರ್ಕ್ ಗಳಿಗೆ, ವಾಹನ ತೊಳೆಯಲು, ಟಾಯಿಲೆಟ್ ಪ್ಲಶ್ ಮಾಡಲು ಬಳಸಬಹುದು. ಇಂತಹದೊಂದು ಆಶಯ, ಕಾನೂನು ಸಣ್ಣ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ಇದ್ದರೂ, ಅದರ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ.

ಬೆಂಗಳೂರಿನಲ್ಲಿ ಕಾರುಗಳನ್ನು ತೊಳೆಯಲು, ಬಸ್ಸುಗಳನ್ನು ತೊಳೆಯಲು, ಪಾರ್ಕ್ ಗಳಿಗೆ ಉಣಿಸಲು ಕುಡಿಯುವ ನೀರನ್ನು ಬಳಸುವ ಪದ್ಧತಿಗೆ ವಿದಾಯ ಹೇಳಿದರೆ ಅದಷ್ಟೋ ನೀರು ಉಳಿದೀತು. ಈ ಎರಡು ಮೂಲಗಳಿಂದ ೩೦ ಟಿಎಂಸಿಗಿಂತ ಹೆಚ್ಚು ನೀರು ಬೆಂಗಳೂರಿನವರಿಗೆ ಸಿಗುತ್ತದೆ.ಜತೆಗೆ ಬೆಂಗಳೂರು ಕೆರೆಗಳ ನಗರ. ನೂರಾರು ವರ್ಷಗಳಿಂದ ಕೆರೆಗಳಲ್ಲಿ ನೀರನ್ನು ಸಂಗ್ರಹಿಸಿ ಉಪಯೋಗಿಸುವ ಪದ್ಧತಿ ಇಲ್ಲಿದೆ. ಒಂದು ಕೆರೆ ತುಂಬಿದರೆ, ಆ ನೀರು ಇನ್ನೊಂದು ಕೆರೆಗೆ ಸಾಗುವಂತಹ ಕಾಲುವೆಗಳನ್ನು ಸ್ವತಂತ್ರ ಪೂರ್ವದಲ್ಲೇ ಇಲ್ಲಿ ನಿರ್ಮಿಸಿದ್ದಾರೆ. ನಗರ ಬೆಳೆಯುವಾಗ ಸಾಕಷ್ಟು ಕೆರೆಗಳು ನಾಶವಾಗಿದ್ದರೂ, ಇನ್ನೂ ಹಲವು ಪ್ರಮುಖ ಕೆರೆಗಳು ಉಳಿದಿರುವ ನಗರ ಬೆಂಗಳೂರು. ಇಲ್ಲಿ ಮಳೆನೀರನ್ನು ಸಂಗ್ರಹಿಸುವುದು ಸುಲಭ!ಮೇಕೆದಾಟು ಯೋಜನೆಯ ಪರಿಕಲ್ಪನೆಯೇ, ೨೧ನೆಯ ಶತಮಾನದ ಇಂದಿನ ದಿನಗಳಲ್ಲಿ, ಪರಿಸರ ವಿರೋಧಿ, ಪ್ರಗತಿ ವಿರೋಧಿ, ಜನವಿರೋಧಿ, ವನ್ಯಜೀವಿ ವಿರೋಧಿ. ೧೯೬೦ರಿಂದಲೇ ಇಂತಹ ಯೋಜನೆಯ ಪ್ರಸ್ತಾಪವಿದ್ದರೂ, ಅದು ಪ್ರಸ್ತಾಪಗೊಂಡ ಕಳೆದ ಶತಮಾನದಲ್ಲಿ, ಅರಣ್ಯಗಳಿಗೆ ಈಗಿರುವಷ್ಟು ಪ್ರಾಮುಖ್ಯತೆ ಇರಲಿಲ್ಲ; ಯಾವ ಅರಣ್ಯವನ್ನಾದರೂ ನಾಶಪಡಿಸಿ, ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದ ಕಾಲವದು.
ಆದರೆ ಅಂತಹ ಅಣೆಕಟ್ಟುಗಳಿಂದಾಗಿ ಅದೆಂತಹ ಪರಿಸರ ವಿರೋಧಿ ಸನ್ನಿವೇಶ ನಿರ್ಮಾಣಗೊಳ್ಳುತ್ತದೆಂದು, ಕಳೆದ ಆರೆಂಟು ದಶಕಗಳ ಉದಾಹರಣೆಗಳು ಅದಾಗಲೇ ತೋರಿಸಿಕೊಟ್ಟಿವೆ. ಶರಾವತಿ ಕೊಳ್ಳದಲ್ಲಿ ನಿರ್ಮಾಣಗೊಂಡ ಲಿಂಗನಮಕ್ಕಿ ಅಣೆಕಟ್ಟಿನಿಂದಾಗಿ ಅಧಿಕೃತವಾಗಿ ಮುಳುಗಿ ಹೋದ ಅರಣ್ಯದ ಜತೆ, ಅನಧಿಕೃತವಾಗಿ, ವಿವಿಧ ಕಾರಣಗಳಿಗಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಯಿತು. ಶರಾವತಿ ಮತ್ತು ವಾರಾಹಿ ನದಿಗಳಿಗೆ ನಿರ್ಮಾಣಗೊಂಡ ಸರಣಿ ಅಣೆಕಟ್ಟುಗಳಿಂದಾಗಿ, ಪರಿಸರ ನಾಶವಾಗಿದ್ದರ ಜತೆ, ಶಿವಮೊಗ್ಗದಂತಹ ಅಭಿವೃದ್ಧಿಶೀಲ ಜಿಲ್ಲೆಯ ಪ್ರಗತಿಯೇ ಕುಂಠಿತಗೊಂಡಿತು. ಅತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆ ಎತ್ತಿದ ಸಾಲು ಸಾಲು ಅಣೆಕಟ್ಟೆಗಳಿಂದಾಗಿ, ಅಪಾರ ಪ್ರಮಾಣದ ಕಾಡು ನಾಶವಾಯಿತು, ವನ್ಯ ಸಂಕುಲ ಸಂಕಷ್ಟಕ್ಕೆ ಈಡಾಯಿತು.ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ, ಈ ರೀತಿಯ ತ್ಯಾಗಗಳಿಂದಾಗಿ ವಿದ್ಯುತ್ ಉತ್ಪಾದನೆಗೆ, ನೀರಾವರಿಗೆ ಪ್ರಾಮುಖ್ಯತೆ ದೊರೆತು, ದೇಶ ಅಭಿವೃದ್ಧಿಗೊಂಡಿತು ಎನ್ನಬಹುದು, ಒಪ್ಪೋಣ. ಆದರೆ, ಈಗ, ಅಂದರೆ ೨೧ನೆಯ ಶತಮಾನದ ಮೂರನೆಯ ದಶಕದಲ್ಲಿ, ಅರಣ್ಯ ಮುಳುಗಿಸಿ ಅಣೆಕಟ್ಟು ಕಟ್ಟುತ್ತೇವೆ ಎಂದು ಮುಂದಾಗುವುದು ಮೂರ್ಖತನವೇ ಸರಿ. ಇದೊಂದು ರೀತಿಯಲ್ಲಿ ನಮ್ಮ ಕಾಲ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಂಡಂತೆ. ಗ್ಲೋಬಲ್ ವಾರ್ಮಿಂಗ್, ಕಾರ್ಬನ್ ಫುಟ್‌ಪ್ರಿಂಟ್, ಅರಣ್ಯ ರಕ್ಷಣೆ, ವನ್ಯ ಜೀವಿ ಸಂರಕ್ಷಣೆ, ಸಸ್ಯಸಂಕುಲದ ರಕ್ಷಣೆ ಮತ್ತು ಅಧ್ಯಯನ ಮೊದಲಾದ ಬಹು ಚರ್ಚಿತ ವಿದ್ಯಮಾನಗಳು ಇಂದು ಮುನ್ನೆಲೆಯಲ್ಲಿವೆ. ಮನುಷ್ಯನು ತನ್ನ ಚಟುವಟಿಕೆಗಳಿಂದ ಹೊರಸೂಸುವ ಕಾರ್ಬನ್ ಡೈ ಆಕ್ಸೆ`ಡ್ ಮತ್ತು ಇತರ ಹಾನಿಕಾರಕ ಅನಿಲಗಳನ್ನು ಕಡಿಮೆ ಮಾಡಲು ಜಾಗತಿಕ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ, ಹಲವು ಕಾರ್ಯಸೂಚಿಗಳು ಜಾರಿಯಲ್ಲಿವೆ. ಈಗ ಜಗತ್ತಿನಲ್ಲಿ ಉಳಿದಿರುವ ಅರಣ್ಯವನ್ನು ರಕ್ಷಿಸಿಕೊಂಡು ಬರುವುದು ಮಾನವನ ಪ್ರಮುಖ ಆದ್ಯತೆಗಳಲ್ಲಿ ಒಂದು ಎಂಬುದು ವಿವಾದೀತವಾಗಿ ಋಜುವಾತುಗೊಂಡಿದೆ, ಆ ಕುರಿತು ಸಕಾರಾತ್ಮಕ ಕೆಲಸಗಳು ನಡೆಯುತ್ತಿವೆ. ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಅರಣ್ಯ ಉಳಿದಿರುವುದರಿಂದ, ಈಗ ಇರುವ ಅರಣ್ಯವನ್ನು ರಕ್ಷಿಸಲೇಬೇಕು, ಸಾ`À್ಯವಾದರೆ ಹೊಸ ಅರಣ್ಯವನ್ನು ಬೆಳೆಸಬೇಕು ಎಂಬ ತಿಳಿವಳಿಕೆ ಸಾರ್ವತ್ರಿಕವಾಗಿದೆ.ಇಂತಹ ಪರಿಸ್ಥಿತಿಯಲ್ಲಿ, ನಾವು ಕಾವೇರಿ ಅಭಯಾರಣ್ಯದ ಕಾಡನ್ನು ನಾಶವಾಗಲು ಬಿಡಬಾರದು.

ಅಕಸ್ಮಾತ್ ರಾಜಕೀಯ ಪಕ್ಷಗಳು ಇಂತಹ ಕಾಡನ್ನು ನಾಶಪಡಿಸುವಂತಹ ಯೋಜನೆಯನ್ನು ಜಾರಿಗೊಳಿಸಲು ಮುಂದಾದರೆ, ಜನರು ಅರಣ್ಯವನ್ನು ರಕ್ಷಿಸಕೊಳ್ಳಲು ಮುಂದಾಗಬೇಕು. ಕೇರಳದಲ್ಲಿ ಸೈಲೆಂಟ್ ವ್ಯಾಲಿಯಂತಹ ಉತ್ತಮ ಕಾಡನ್ನು ಅಣೆಕಟ್ಟೆಯಲ್ಲಿ ಮುಳುಗಿಸಲು ಅಂದಿನ ಸರಕಾರ ಮುಂದಾದಾಗ, ಜನರು ಹಕ್ಕೊತ್ತಾಯ ಮಾಡಿ, ಅರಣ್ಯವನ್ನು ರಕ್ಷಿಸಿದರು, ಇಂದಿಗೂ ಆ ಅರಣ್ಯ ಬದುಕಿ ಉಳಿದಿದೆ. ಅದೇ ರೀತಿ, ಈಗ ನಾವು ಕಾವೇರಿ ಅ`Àಯಾರಣ್ಯದ ಆ ಭಾಗವನ್ನು ಉಳಿಸಿಕೊಳ್ಳಬೇಕು.ಮೇಕೆದಾಟು ಸುತ್ತ ಮುತ್ತ ಇರುವ ಕಾಡಿನಲ್ಲಿ ವಾಸಿಸುತ್ತಿರುವ ನೀರು ನಾಯಿಯನ್ನೋ, ಮಹಶೀರ್ ಮೀನನ್ನೋ, ಅಪರೂಪದ ಅಳಿಲನ್ನೋ, ಆನೆ ಸಂಕುಲವನ್ನೋ ಜತನದಿಂದ ಕಾಪಾಡಲು ನಾವು ಯೋಚಿಸಲು ಇದೇ ಸಕಾಲ. ಅಲ್ಲಿನ ಕಾಡು, ಗಿಡ, ಮರ, ಬಳ್ಳಿ, ಕಲ್ಲುಗಳು, ಹುಲ್ಲುಗಾವಲುಗಳನ್ನು ಈಗಿರುವಂತೆಯೇ ಮುಂದುವರಿಯಲು ಬಿಡಬೇಕು. ೨೧ನೆಯ ಶತಮಾನದ ಆ`ÀÄನಿಕ ಮಾನವನ ಜವಾಬ್ದಾರಿ ಇದು. ನಮ್ಮ ಮಕ್ಕಳ, ಮೊಮ್ಮಕ್ಕಳ ಜೀವನ ಸುಖವಾಗಿರಲು ನಾವು ತೆಗೆದುಕೊಳ್ಳಲೇ ಬೇಕಾದ ಕಾಳಜಿ ಇದು.
ಅರಣ್ಯ ನಾಶದ ವಿಚಾರ ಬಂದಾಗ, ರಾಜಕೀಯ ಪಕ್ಷ ಯಾವುದೇ ಇರಲಿ, ಪರಿಸರ ಕಾಳಜಿ ಮೊದಲಾಗಿರಲಿ. ಒಂದು ಕಡೆ ಕಾಡನ್ನು ನಾಶ ಮಾಡುತ್ತಾ ಅಲ್ಲಿಂದ `ಕುಡಿಯುವ ನೀರನ್ನು ಕೊಡುವುದು ತಮ್ಮ ಕರ್ತವ್ಯ’ ಎಂದು ಯಾವುದೇ ಪಕ್ಷದ ರಾಜಕೀಯ ನಾಯಕರು ಹೇಳಿದರೆ, ಅವರ ಉದ್ದೇಶವನ್ನೇ ಸಂಶಯದಿಂದ ನೋಡಬೇಕಾಗುತ್ತದೆ.ಹಾಗಾದರೆ `ನನಗೆ ನೀರು?’ ಎಂದು ಬೆಂಗಳೂರು ವಾಸಿ ಕೇಳಿಯಾನು. ಬೆಂಗಳೂರಿನ ದಾಹ ತಣಿಸಲು ಮಳೆ ನೀರಿನ ಸಂಗ್ರಹ (ಸುಮಾರು ೧೫ ಟಿಎಂಸಿ), ಮರು ಬಳಕೆಯ ನೀರು (ಸುಮಾರು ೧೫ಟಿಎಂಸಿ) ಮೊದಲಾದ ದಾರಿಗಳನ್ನು ಅನುಸರಿಸಬೇಕೇ ಹೊರತು, ಕಾವೇರಿ ಕೊಳ್ಳದ ಕಾಡನ್ನು ಮುಳುಗಿಸಲು ಹೋಗಬಾರದು ಎಂದರೆ ತಜ್ಞರೂ ಒಪ್ಪುತ್ತಾರೆ, ಜನಸಾಮಾನ್ಯರೂ ಒಪ್ಪುತ್ತಾರೆ.
Writeup: Shashidhar Halady
https://www.facebook.com/shashidhara.halady