ಬಂಡೀಪುರ ಅರಣ್ಯ ವಲಯದ ಗುಂಡ್ರೆ ರೇಂಜ್ ನಲ್ಲಿ ಆದಿವಾಸಿ ವ್ಯಕ್ತಿ ಅರಣ್ಯಾಧಿಕಾರಿಗಳ ವಶದಲ್ಲಿದ್ದ ವೇಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತ ಸರಗುರ್ ಪೊಲೀಸರು 17 ಮಂದಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಎಸ್ ಸಿ/ಎಸ್ ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಪೊಲೀಸರು ದಾಖಲಿಸಿದ ಎಫ್‌ಐಆರ್ ನಲ್ಲಿ, ಪ್ರಕರಣದಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಅಮೃತೇಶ್, ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಯಾದವ್, ಇಬ್ಬರು ಅರಣ್ಯಾಧಿಕಾರಿಗಳು ಮತ್ತು ಇತರ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೊಸಹಳ್ಳಿ ಗ್ರಾಮದ ಕರಿಯಪ್ಪ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದನು. ಅರಣ್ಯಾಧಿಕಾರಿಗಳ ಕಸ್ಟಡಿಯಲ್ಲಿ ಆತ ಮೃತಪಟ್ಟಿದ್ದು, ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಚಿಕ್ಕಮಾದು ಕರಿಯಪ್ಪ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವುದರ ಜೊತೆಗೆ ಅವರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಕೂಡ ಒತ್ತಾಯಿಸಿದರು. ಈ ಮಧ್ಯೆ, ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಕರಿಯಪ್ಪ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಅರಣ್ಯ ಸಿಬ್ಬಂದಿ ವಶದಲ್ಲಿದ್ದ ಕರಿಯಪ್ಪ ಅನುಮಾನಾಸ್ಪದ ಸಾವು ಪ್ರಕರಣವನ್ನ CID ತನಿಖೆಗೆ ನೀಡಬೇಕು ಎಂದು ಹೆಚ್.ಡಿ.ಕೋಟೆಯ ಶಾಸಕ ಅನಿಲ್ ಚಿಕ್ಕಮಾದು ಒತ್ತಾಯಿಸಿದ್ದಾರೆ.

ಗುರುವಾರ ಮೈಸೂರಿನ ಶವಾಗಾರಕ್ಕೆ ಭೇಟಿ ನೀಡಿದ್ದ ಅನಿಲ್ ಚಿಕ್ಕಮಾದು ಮೃತ ಕರಿಯಪ್ಪ ಅಂತಿಮ ದರ್ಶನ ಪಡೆದ ಬಳಿಕ ಭಾವುಕರಾಗಿದ್ರು. ಇದು HD.ಕೋಟೆ ತಾಲೂಕಿನಲ್ಲಿ ನಡೆದಿರುವ 2ನೇ ಪ್ರಕರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ವಶದಲ್ಲಿದ್ದಾಗಲೇ ಕರಿಯಪ್ಪ ಸಾವನ್ನಪ್ಪಿದ್ದಾನೆ. ಕರಿಯಪ್ಪನ ದೇಹದ ಮೇಲೂ ಗಾಯದ ಗುರುತುಗಳು ಇವೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಮೃತನ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಜೊತೆಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ರು.
ಗಿರಿಜನ ಹಾಡಿ ನಿವಾಸಿ ಕರಿಯಪ್ಪ ಅನುಮಾನಾಸ್ಪದ ಸಾವು ಪ್ರಕರಣ ಮೃತನ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಭೇಟಿ ನೀಡಿದ್ದಾರೆ. ಹೆಚ್.ಡಿ.ಕೋಟೆಯ ಬೇಗೂರು ಅರಣ್ಯ ಪ್ರದೇಶದಲ್ಲಿ ಇರುವ ಹಾಡಿಗೆ ಭೇಟಿ ನೀಡಿದ MLC ಹೆಚ್.ವಿಶ್ವನಾಥ್ ಮೃತ ಕರಿಯಪ್ಪನ ಅಂತಿಮ ದರ್ಶನ ಪಡೆದ ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ನ್ಯಾಯಾಂಗ ಹೋರಾಟಕ್ಕೆ MLC ಹೆಚ್.ವಿಶ್ವನಾಥ್ ಚಿಂತನೆ ನಡೆಸಿದ್ದಾರೆ.ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆ ಇದ್ದ ವಿಶ್ವನಾಥ್ ಸಾಂತ್ವನ ಹೇಳಿದರು.