ಕಾಡಾನೆ ದಾಳಿಗೆ ಮೃತನಾದ ಅಂಬಾರಿ
ಅರ್ಜುನನ ಸಮಾಧಿ ಬಳಿ ಕಾಡಾನೆಗಳು ದಾಂಧಲೆ ನಡೆಸಿರುವುದು ವರದಿಯಾಗಿದೆ.
ಅರ್ಜುನನ ಸಮಾಧಿ ಸುತ್ತ ಹಾಕಿದ್ದ ತಂತಿಬೇಲಿಯನ್ನು ಮುರಿದಿರುವ ಗಜಪಡೆ ಸಮಾಧಿ ಬಳಿಯೆಲ್ಲಾ ಓಡಾಡಿವೆ.
ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತನಾದ ಸ್ಥಳದಲ್ಲೇ ಅರ್ಜುನನ ಸಮಾಧಿ ಮಾಡಲಾಗಿದೆ. ತಾತ್ಕಾಲಿಕವಾಗಿ ಸಮಾಧಿ ಸುತ್ತ ಅರಣ್ಯ ಇಲಾಖೆ ಬೇಲಿ ಹಾಕಿತ್ತು. ಗುರುವಾರ ರಾತ್ರಿ ಈ ಸ್ಥಳಕ್ಕೆ ಆಗಮಿಸಿರುವ ಹಿಂಡು ಬೇಲಿ ನೆಲಸಮಗೊಳಿಸಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅರ್ಜುನ ಮೃತನಾಗಿ ಹನ್ನೊಂದು ದಿನ ಕಳೆದ ಹಿನ್ನೆಲೆ ಸ್ಥಳೀಯರು ಅರ್ಜುನನ ಭಾವಚಿತ್ರವಿಟ್ಟು ವಿವಿಧೆಡೆ ಪೂಜೆ ಸಲ್ಲಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಲ್ಲಿಸಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಮೃತ ಅರ್ಜುನನ ಹೆಸರಿನಲ್ಲಿ ಎರಡು ಕಡೆ ಸ್ಮಾರಕ ನಿರ್ಮಾಣ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಎರಡು ವಾರಗಳಲ್ಲಿ ಆನೆ ಸಾವಿಗೆ ಕಾರಣ ವರದಿ ತರಿಸಿಕೊಳ್ಳೋದಾಗಿಯೂ ಭರವಸೆ ನೀಡಿದ್ದಾರೆ. ಈಗಲೂ ಸಹ ಈ ಭಾಗದ ಜನರಿಗೆ ಅರ್ಜನನ ನೆನಪು ಕಾಡುತ್ತಿದೆ.