ಶಿವಮೊಗ್ಗ ಜಿಲ್ಲೆ ಹೆಸರಿಗೆ ಮಲೆನಾಡಿನ ಹೆಬ್ಬಾಗಿಲು, ಇಲ್ಲಿ ನಿತ್ಯ ‘ಅರಣ್ಯ’ ರೋಧನ. ಭೂಗಳ್ಳರು, ಮಾಫಿಯಾ, ಒತ್ತುವರಿದಾರರಿಂದ ದಿನೇ ದಿನೇ ಸರ್ಕಾರಿ ಜಮೀನು ಸುಳ್ಳು ದಾಖಲೆಗಳಿಂದ ಕ್ಷೀಣಿಸುತ್ತಿದೆ. ಇಂತಹದೊಂದು ಪ್ರಕರಣ ಶಿವಮೊಗ್ಗ ಜಿಲ್ಲೆ ( ಶಿವಮೊಗ್ಗ ತಾಲೂಕು) ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಇಲ್ಲಿ ಅರಣ್ಯ ಇಲಾಖೆಯ ಸಂಶೋಧನಾ ಕೇಂದ್ರವಿದೆ. ಕೇಂದ್ರಕ್ಕೆ ಸರ್ಕಾರ ಜಮೀನು ಮಂಜೂರು ಮಾಡಿದೆ. ಸುಮಾರು 40 ವಿವಿಧ ಸರ್ವೆ ನಂಬರ್ ಗಳಲ್ಲಿ ವಿಸ್ತೃತವಾಗಿ ಹರಡಿಕೊಂಡಿರುವ ಈ ಕೇಂದ್ರ ಅಮೂಲ್ಯ ಸಸ್ಯ ಸಂಶೋಧನೆಗೆ ಹೆಸರುವಾಸಿ. ಆದರೆ ಇಲ್ಲಿ ಭೂಗಳ್ಳರ ಅತಿಕ್ರಮಣದ ದರ್ಪಕ್ಕೆ ಸರ್ಕಾರಿ ಭೂಮಿ ಕಣ್ಮರೆ ಆತಂಕ ವ್ಯಕ್ತವಾಗಿದೆ.
ಆದರೆ ಇಲ್ಲಿನ ದಕ್ಷ ಅಧಿಕಾರಿ ( ಅರಣ್ಯ ವಲಯ ಅಧಿಕಾರಿ RFO) ರೇವಣ್ಣಸಿದ್ದಯ್ಯ ಹಿರೇಮಠ್ ಭೂಗಳ್ಳರ ವಿರುದ್ಧ ಸಮರ ಸಾರಿದ್ದಾರೆ. ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಜಿಲ್ಲಾಡಳಿತ, ಕಂದಾಯ ಇಲಾಖೆ ಅಲ್ಪ ಸಲ್ಪ ಚದುರಿದಂತೆ ಇರುವ ಸರ್ಕಾರಿ ಬಂಜರು ಭೂಮಿಯನ್ನು ಇಲಾಖೆಗೆ ಅಧಿಕೃತವಾಗಿ ನೀಡದೇ ಯಾವುದೇ ಪ್ರಯೋಜನವಿಲ್ಲ.

ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಸಿಗುವ ಕಲ್ಲಾಪುರ ಗ್ರಾಮದಲ್ಲಿ 63 ಎಕರೆ ವಿಸ್ತೀರ್ಣದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವಿದೆ. ಶಿವಮೊಗ್ಗ ನಗರದಿಂದ ಹದಿನೈದು ಕಿಲೋಮಿಟರ್ ಅಂತರದಲ್ಲಿದೆ. ಪಹಣಿಯಲ್ಲೂ ಈ ಭೂಮಿ ಅರಣ್ಯ ಇಲಾಖೆ ಎಂದು ನೊಂದಾಯಿಸಲ್ಪಟ್ಟಿದೆ. ಇದೇ ಜಾಗದಲ್ಲಿ ಅಲ್ಪ ಸ್ವಲ್ಪ ಹೊಂದಿಕೊಂಡಂತೆ ಸರ್ಕಾರಿ ಬಂಜರು ಭೂಮಿಯೂ ಇದೆ. ಹಲವು ವರ್ಷಗಳಿಂದಲೂ ಸಂಶೋಧನಾ ಕೇಂದ್ರದೊಳಗೇ ಇರುವ ಈ ಜಮೀನಿನಲ್ಲಿ ಸಸ್ಯವರ್ಗ ಸೊಂಪಾಗಿದ್ದು ಕಾಡಂತೆ ಕಂಗೊಳಿಸುತ್ತಿದೆ. ಇದೇ ಗ್ರಾಮದ ಪಕ್ಕದಲ್ಲಿರುವ ಕುಂಚೇನಹಳ್ಳಿಯ ಪ್ರಭಾವಿ ವ್ಯಕ್ತಿಗಳಿಗೆ ಈ ಜಾಗ ಕಣ್ಣಿಗೆ ಬಿದ್ದಿದ್ದೇ ತಡ, ಅರಣ್ಯ ಇಲಾಖೆಗೆ ಬಿಟ್ಟು ಕೊಡಲು ಬೆದರಿಸಿದ್ದಾರೆ. ನಿತ್ಯ ಸಂಘರ್ಷದ ನಂತರ ಕಳೆದ ವಾರ ಜೆಸಿಬಿ ಯಂತ್ರದೊಂದಿಗೆ ರಾತ್ರೋ ರಾತ್ರಿ ನುಗ್ಗಿ ಧ್ವಂಸ ಮಾಡಲು ಯತ್ನಿಸಿದ್ದಾರೆ. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಆರ್ ಎಫ್ ಓ ಹಿರೇಮಠ್, ಜಿಸಿಬಿ ಯಂತ್ರ ನಿಲ್ಲಿಸಲು ಮುಂದಾದಾಗ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಷ್ಟೇ ಅಲ್ಲದೇ ನಿಲ್ಲಿಸು ನೋಡೋಣ ಎಂದು ಧಮ್ಕಿ ಹಾಕಿದ್ದಾರೆ. ತಕ್ಷಣ 112 ತುರ್ತು ಪೊಲೀಸ್ ಸೇವೆ ವಾಹನಕ್ಕೆ ಕರೆ ಮಾಡಿದ ಹಿರೇಮಠ್, ಪೊಲೀಸರ ವಾಹನ ಎದುರು ನೋಡುತ್ತಿದ್ದಂತೆ ಭೂಗಳ್ಳರು ಕಾಲ್ಕಿತ್ತಿದ್ದಾರೆ. ಈ ಕುರಿತು ಮೇ.29 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕುಂಚೇನಹಳ್ಳಿಯ ವಿನಾಯಕ, ವಾಸುದೇವ ನಾಯ್ಕ್, ತೀರ್ಥಾ ನಾಯ್ಕ್ ಹಾಗೂ ಜೆಸಿಬಿ ವಾಹನ ಚಾಲಕರ ಮೇಲೆ ಸೆಕ್ಷನ್ IPC 1860 ಅಡಿ ಪ್ರಕರಣ ದಾಖಲಾಗಿದೆ.

ಇಷ್ಟೆಲ್ಲಾ ಕಾಳಜಿ ಇರುವ ಅರಣ್ಯಾಧಿಕಾರಿ ಹಿರೇಮಠ್ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು, ಈ ಜಾಗದ ಮ್ಯುಟೇಷನ್ ಮಾಡಲು ಮನವಿ ಮಾಡಿದ್ದಾರೆ. ಆದರೆ ಈ ತನಕ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿಲ್ಲ. ಗ್ರಾಮಾಂತರ ಪೊಲೀಸರು ಆರೋಪಿಗಳನ್ನೂ ಬಂಧಿಸಿಲ್ಲ. ಇಂತಹ ಅಮೂಲ್ಯ ಜಮೀನು ಅರಣ್ಯ ಇಲಾಖೆ ಸುಪರ್ದಿಯಲ್ಲೇ ಉಳಿಯಲು ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ. ವಿಶ್ವ ಪರಿಸರ ದಿನ ಎದುರು ನೋಡುತ್ತಿರುವ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನೆರವಿಗೆ ಬರಬೇಕಿದೆ.