Ode to the west wind

Join Us on WhatsApp

Connect Here

ಆನೆ ಬಾಲ ಕಟ್ ಮಾಡಿದ ಕಿಡಿಗೇಡಿ ಯಾರು.?

WhatsApp
Facebook
Twitter
LinkedIn

ಶಿವಮೊಗ್ಗ: ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹತ್ತು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಸಕ್ರೆಬೈಲು ಕ್ಯಾಂಪ್ ಆನೆ ಪಳಗಿಸುವಲ್ಲಿ ಹಾಗೂ ಸಾಕುವಲ್ಲಿ ಖ್ಯಾತಿ ಪಡೆದಿದೆ. ಮಲೆನಾಡಿನ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಆದರೆ ಇಲ್ಲೊಂದು ಅಹಿತ ಘಟನೆ ನಡೆದಿದೆ. ಅರಣ್ಯ ಇಲಾಖೆಗೆ ಮಾತ್ರ ಈ ಘಟನೆ ತೀರಾ ಕ್ಷುಲ್ಲಕ ಎನಿಸಿದೆ.

ಸಕ್ರೆಬೈಲಿನ ಹೆಣ್ಣಾನೆ ಭಾನುಮತಿ ಹದಿನೆಂಟು ತಿಂಗಳ ಗರ್ಭಿಣಿ ( ಆನೆ ಪ್ರಸವ ಸಮಯ ಸರಾಸರಿ 24 ತಿಂಗಳು). ತುಂಗಾ ತೀರದಲ್ಲಿ ಎಂದಿನಂತೆ ಸ್ನಾನ ಮಾಡಿಸಿ ಕಾಡಿಗೆ ಮೇಯಲು ಬಿಟ್ಟಾಗ ಹಾದಿಯಲ್ಲಿ ರಕ್ತ ಚೆಲ್ಲಿತ್ತು. ಮರಿ ಹಾಕಿ ಬಿಡ್ತೇನೋ ಎಂಬ ಖುಷಿಯಿಂದ ಆನೆ ಜಾಡು ಹಿಡಿದು ಹೊರಟ ಸಿಬ್ಬಂದಿಗೆ ಕಂಡಿದ್ದು ತುಂಡಾಗಿ ನೇತಾಡುತ್ತಿದ್ದ ಆನೆ ಬಾಲ..! ಯಾರೋ ಹರಿತದ ಆಯುಧದಿಂದ ಒಂದೇ ಏಟಿಗೆ ಬಾಲ ಜೋತಾಡುವಂತೆ ಹೊಡೆದಿದ್ದರು. ಇದು ಇಲಾಖೆ ಸಿಬ್ಬಂದಿ ವಿವರಣೆ ಹಾಗೂ ಅದಕ್ಕೆ ಪೂರಕವೆಂಬಂತೆ ಇರುವ ಸಂದರ್ಭ.

ಮಂಗಳವಾರ ಮುಂಜಾನೆ ಶಿವಮೊಗ್ಗದ ಸಕ್ರೆಬೈಲಿನಲ್ಲಿ ದಸರಾ ಆನೆಗಳಿಗೆ ಪೂಜೆ ಮಾಡಲು ಕೆಲ ಜನಪ್ರತಿನಿಧಿಗಳು ತೆರಳಿದ್ದರೆ, ಅತ್ತ ಇನ್ನೊಂದು ಸುದ್ದಿ ಹರಡಿತ್ತು. ಮೇಯಲು ಬಿಟ್ಟ ಸುಮಾರು ಮೂವತ್ತೈದು ವರ್ಷದ ಹೆಣ್ಣಾನೆ ಭಾನುಮತಿ ಬಾಲಕ್ಕೆ ಸೋಮವಾರ ತುಂಡಾಗುವಂತೆ ಹೊಡೆದಿದ್ದರು. ಕಾಡಾನೆ-ಸಾಕಾನೆ ಗುದ್ದಾಟ,  ಜನರು ಈ ಆನೆಗಳನ್ನ ಬೆದರಿಸುವ ಕೆಲ ಘಟನೆಗಳು ಹಿಂದೆ ನಡೆದಿದ್ದರೂ ಇದು ಭಿನ್ನವಾಗಿ ಕಾಣುತ್ತಿತ್ತು.  ಸಕ್ರೆಬೈಲು ಆನೆಗಳ ಆರೋಗ್ಯ ನೋಡಿಕೊಳ್ಳುತ್ತಿರುವ ಪಶು ವೈದ್ಯ ವಿನಯ್, ಬಾಲ ಹೊಲಿದು ಯಾವುದೇ ಆತಂಕ ಬೇಡ ಎಂದರು. ಮುಚ್ಚು-ಮರೆಯಂತೆ ನಡೆದ ಈ ಕೆಲಸ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಡತೊಡಗಿತೋ ಆಗ ಎಚ್ಚೆತ್ತ ಇಲಾಖೆ ತನಿಖೆ ಮಾಡಿಸಲು ಮುಂದಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಫ್ ( ವನ್ಯಜೀವಿ ವಿಭಾಗ) ಪ್ರಸನ್ನ ಕೃಷ್ಣ ಪಟಗಾರ್, ಆನೆ ಬಾಲ ಅರ್ಧ ಇಂಚಷ್ಟೇ ಕಟ್ ಆಗಿದೆ. ಸ್ಟಿಚ್ ಮಾಡಲಾಗಿದೆ. ಆರೋಗ್ಯ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ. ಆದರೆ ಯಾರು ಮಾಡಿದರು ಎಂದು ಕಂಡು ಹಿಡಿಯಲು ತನಿಖೆಗೆ ಆದೇಶ ನೀಡಿದ್ದೇನೆ ಎಂದರು.

ಹಿಂದೆ ಈ ತರಹದ ಘಟನೆ ನಡೆಯದ ಕಾರಣ, ಅರಣ್ಯ ಇಲಾಖೆ ಒಳಗೇ ಇರುವವರ ಪರಸ್ಪರ ದ್ವೇಷಕ್ಕೆ ಯಾರಾದರೂ ಹೀಗೆ ಮಾಡಿದ್ದಾರ ಎಂಬ ಪ್ರಶ್ನೆಯನ್ನ ತಳ್ಳಿಹಾಕಿದರು. ಬಿದಿರು ತಾಗಿಯೂ ಆಗಿರಬಹುದು ಎಂದು ತರ್ಕವಿಲ್ಲದ ಉತ್ತರ ನೀಡಿದ್ದಾರೆ. ಮಂಗಳವಾರ ಸಂಜೆವರೆಗೂ ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.

ತುಂಬು ಗರ್ಭಿಣಿ ಆನೆ, ಬಾಲದ ನೋವು ತಾಳಿ ಮರಿಗೆ ಜನ್ಮ ನೀಡುವ ಸಮಯ ಎದಿರು ನೋಡಬೇಕಿರುವ ಇಲ್ಲಿನ ಸಿಬ್ಬಂದಿಗಳಲ್ಲಿ ಕೂಡ ಒಗ್ಗಟ್ಟಿಲ್ಲ. ನಾನಾ ಕಾರಣಗಳಿಂದ ವೈಮನಸ್ಸು ಇಟ್ಟುಕೊಂಡು ಪರಸ್ಪರ ಕಿಡಿಕಾರಿಕೊಳ್ಳುತ್ತಾರೆ ಎನ್ನುವ ಆರೋಪ ಹಿಂದಿನಿಂದಲೂ ಇದೆ. ಎಷ್ಟೇ ಬಲಶಾಲಿ ವ್ಯಕ್ತಿಯೇ ಆಗಿರಲಿ ಆನೆಯ ಬುಡಕ್ಕೆ ಹೋಗಿ ಕತ್ತಿಯಿಂದ ಬಾಲ ಕಟ್ ಮಾಡಲು ಅಸಾಧ್ಯ ಎನ್ನುವ ವನ್ಯಜೀವಿ ಪರಿಣತರು,  ಆನೆಗಳ ಬಗ್ಗೆ ಆಸಕ್ತಿ ತೋರದ ಕ್ಯಾಂಪ್ ನ ಬೆರಳೆಣಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಾರೆ. ಭಾನುಮತಿ ಆನೆ ಗರ್ಭಧರಿಸಿ ಎಷ್ಟು ತಿಂಗಳು ಎಂದು ಕರಾರುವಕ್ಕಾಗಿ ಕೂಡ ಮಾಹಿತಿ ನೀಡದ ವನ್ಯಜೀವಿ ಇಲಾಖೆ, ದಾವಣಗೆರೆಯಲ್ಲಿ ಆನೆ ದಾಳಿಯಿಂದ ಪೆಟ್ಟು ತಿಂದು ಚೇತರಿಸಿಕೊಂಡ ವೈದ್ಯರನ್ನೇ ಪುನಃ ನೇಮಕ ಮಾಡಿಕೊಂಡಿದೆ. ಸಂಖ್ಯೆಯಲ್ಲಿ ಇಪ್ಪತೈದರ ಗಡಿ ದಾಟಿದ್ದ ಆನೆಗಳೀಗ ಉತ್ತರ ಭಾರತ ಪ್ರವಾಸದಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ತುಂಗಾ ತೀರದ ರಮಣೀಯ ಪರಿಸರದಲ್ಲಿ ಪ್ರತಿದಿನ ನೂರಾರು ಪ್ರವಾಸಿಗರನ್ನ ಆಕರ್ಷಿಸುವ ಕ್ಯಾಂಪ್ ಆದಾಯಕ್ಕೂ ಕೊರತೆ ಇಲ್ಲ‌‌. ಇಲ್ಲಿ ಸಾಕಷ್ಟು ನುರಿತ ಕಾವಾಡಿ, ಮಾವುತರೂ ಇದ್ದಾರೆ. ಸಿಬ್ಬಂದಿಯಷ್ಟೇ ಅಲ್ಲದೇ ಗಾರ್ಡ್ ನಿಂದ ಎಸಿಎಫ್ ತನಕ ಅಧಿಕಾರಿಗಳೂ ಕೂಡ ಇದರ ಮುತುವರ್ಜಿ ಹೊಣೆ ಹೊತ್ತಿರುತ್ತಾರೆ.

ಭಾನುಮತಿ ಆನೆಯನ್ನ ನೋಡಿಕೊಳ್ಳಲೆಂದೇ ಸುದೀಪ್ ಹಾಗೂ ಮಹಮ್ಮದ್ ಎಂಬ ಇಬ್ಬರು ಕಾವಾಡಿಗಳನ್ನ ನೇಮಿಸಲಾಗಿತ್ತು. ಆದರೂ ಸಹ ಇಂತ ಅಚಾತುರ್ಯ ಹೇಗೆ ಸಂಭವಿಸಿತು ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ.  ಪ್ರಕರಣದ ಗತಿಯ ಬಗ್ಗೆ ಮಾಹಿತಿಯೂ ನೀಡದೇ ನಮ್ಮೆಲ್ಲರ ನೆನಪಿನಿಂದ ಈ ಕೆಟ್ಟ ಘಟನೆ ಮರೆಯಾಗುವುದರಲ್ಲಿ ಸಂಶಯವಿಲ್ಲ. 

You Might Also Like This