Rain Land

Ode to the west wind

Join Us on WhatsApp

Connect Here

ನೀರಿಲ್ಲ, ನಿರ್ವಹಣೆ ಇಲ್ಲ, ಸೊರಬದ ಗುಡವಿ ಪಕ್ಷಿಧಾಮದಲ್ಲಿ ಬಾನಾಡಿಗಳ ಮಾರಣಹೋಮ

WhatsApp
Facebook
Twitter
LinkedIn

ಸೊರಬ:

ಸೊರಬದಲ್ಲಿರುವ ಗುಡವಿ ಪಕ್ಷಿಧಾಮ ವಲಸೆ ಹಕ್ಕಿಗಳಿಗೆ ಪ್ರಾಶಸ್ತ್ಯವಾದ ಸ್ಥಳವಾಗಿತ್ತು. ಪರಿಸರ ಪ್ರೇಮಿಗಳು, ಪಕ್ಷಿ ವೀಕ್ಷಕರಿಗೂ ನೆಚ್ಚಿನ ತಾಣವಾಗಿತ್ತು. ಆದರೆ ಈಗದು ಹಕ್ಕಿಗಳಿಗೆ ಸ್ಮಶಾನವಾಗಿದೆ. ಬಿಸಿಲಿನ ಝಳಕ್ಕೆ ನೀರೆಲ್ಲಾ ಬತ್ತಿ ಮರುಭೂಮಿಯಂತಾಗಿದೆ. ಏನೂ ಅರಿಯದ ಮುಗ್ಧ ಪಕ್ಷಿಗಳೀಗ ನಿಂತಲ್ಲೇ ಪ್ರಾಣ ಬಿಡುತ್ತಿವೆ. ನಾಲ್ಕು ದಶಕಗಳಿಂದ ಅಭಿವೃದ್ಧಿ ಕಾಣದ ಈ ತಾಣ ಈ ವರ್ಷ ಹವಾಮಾನ ವೈಪರೀತ್ಯಕ್ಕೆ ನಮ್ಮ ವ್ಯವಸ್ಥೆಯನ್ನ ಅಣಕಿಸುತ್ತಿದೆ. ಪಕ್ಷಿಧಾಮದಲ್ಲಿ ಸಾಲು ಸಾಲು ಹಕ್ಕಿಗಳು ಮೃತಪಟ್ಟಿದ್ದರೂ ಸಹ ಅರಣ್ಯ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ. ರಾಜಕಾರಣಿಗಳಿಗೆ ಇದರ ಬಗ್ಗೆ ಅರಿವೆಯೇ ಇಲ್ಲದಂತೆ ಕಾಣುತ್ತಿದೆ.

ಸೊರಬದಿಂದ ಹದಿನೈದು ಕಿಲೋಮೀಟರ್‌ ದೂರದಲ್ಲಿ ಗುಡವಿ ಪಕ್ಷಿಧಾಮವಿದೆ. ಸುಮಾರು ೧೮೨ ಎಕರೆಗಳ ವಿಸ್ತಾರ ಪ್ರದೇಶದಲ್ಲಿ ಮೂವತ್ತು ಎಕರೆ ದೈತ್ಯ ಕೆರೆಯಲ್ಲಿ ಬಾನಾಡಿಗಳ ಕಲರವ ಪ್ರವಾಸಿಗರನ್ನ ಆಕರ್ಷಿಸುತ್ತಿತ್ತು. ಮಳೆಗಾಲ ಆರಂಭವಾಗುತ್ತಿದ್ದಂತೆ ನಾನಾ ಕಡೆಯಿಂದ ನಲವತ್ತಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು ಇಲ್ಲಿಗೆ ಆಗಮಿಸಿ ಸಂತಾನೋತ್ಪತ್ತಿ ತರುವಾಯ ನವೆಂಬರ್‌ ತಿಂಗಳಲ್ಲಿ ಮರು ಪಯಣ ಬೆಳೆಸುತ್ತಿದ್ದವು. ಆದರೆ ಈ ವರ್ಷ ಗುಡವಿ ಪಕ್ಷಿಧಾಮ ಈ ಹಕ್ಕಿಗಳ ಪಾಲಿಗೆ ಶವಾಗಾರವಾಗಿ ಪರಿಣಮಿಸಿದೆ. ಇಲ್ಲೇ ಜನ್ಮತಾಳಿದ ಪಕ್ಷಿಗಳೀಗ ಕುಂತಲ್ಲೇ ನೆಲಕ್ಕೊರಗುತ್ತಿವೆ. ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಗುಡವಿ ಕೆರೆ ಈಗ ಸಾವಿನ ಮನೆಯಾಗಿದೆ. ನೂರಾರು ಪಕ್ಷಿಗಳ ದೇಹಗಳು ಮಣ್ಣಾಗುತ್ತಿದ್ದರೂ ಸಹ ಅರಣ್ಯ ಇಲಾಖೆ ಮಾತ್ರ ಹೆಚ್ಚೆಂದರೆ ಮೂವತ್ತು ಪಕ್ಷಿಗಳು ಪ್ರಾಣ ಬಿಟ್ಟಿರಬಹುದು ಎನ್ನುತ್ತಿದೆ.

೧೦೮೬ರಲ್ಲಿ ಜೆ.ಎಚ್‌ ಪಟೇಲ್‌ರಿಂದ ಉದ್ಘಾಟನೆಗೊಂಡ ಈ ಪಕ್ಷಿಧಾಮ ಅಧ್ಭುತ ತಾಣ. ಒತ್ತುವರಿ, ಕೃಷಿ ಭೂಮಿ ರಾಸಾಯನಿಕ ಬಳಕೆಯಿಂದ ನಲುಗಿದ್ದರೂ ನೀರು ಸಂಪನ್ನವಾಗಿರುತ್ತಿತ್ತು ಹಾಗಾಗಿ ಪಕ್ಷಿಗಳ ಸಾವಿನ ಸಂಖ್ಯೆ ಕಡಿಮೆ ಇತ್ತು. ಇಷ್ಟು ವರ್ಷ ಯೋಗನಿದ್ರೆಯಲ್ಲಿದ್ದ ಇಲಾಖೆ ಈ ಸ್ಥಳ ಅಭಿವೃದ್ಧಿಗೆ ಪಣತೊಡಲೇ ಇಲ್ಲ. ಅಂದಿನ ಸಿಎಂ ಎಸ್‌ ಬಂಗಾರಪ್ಪನವರು ಏತ ನೀರಾವರಿ ಮೂಲಕ ನೀರು ಹರಿಸುವ ಯೋಜನೆ ರೂಪಿಸಿದ್ದರು. ಆದರೆ ಬಂಗಾರಪ್ಪನವರ ರಾಜಕೀಯ ಕೊನೆಗೊಳ್ಳುತ್ತಿದ್ದಂತೆ ಮಕ್ಕಳ ಕಾಲಕ್ಕೆ ಪುನಃ ಈ ಪ್ರದೇಶ ನೇಪಥ್ಯಕ್ಕೆ ಜಾರತೊಡಗಿತು. ಹಿಂದಿನ ಸರ್ಕಾರದಲ್ಲಿ ಕುಮಾರ್‌ ಬಂಗಾರಪ್ಪ ಪಕ್ಷಿಧಾಮ ಅಭಿವೃದ್ಧಿಗೆ ಆಸಕ್ತಿ ತೋರಿದರೂ ಸಹ ರಚನಾತ್ಮಕ ಕೆಲಸಗಳೇನೂ ಆಗದೇ, ನೀರಿಲ್ಲದೇ ಹಕ್ಕಿಗಳು ಸಾಯುತ್ತಿವೆ ಯಾರು ಹೊಣೆ ಎಂಬ ಉಡಾಫೆ ಉತ್ತರ ನೀಡುವ ಪರಿಸ್ಥಿತಿ ಬಂದಿದೆ.

ಪತ್ರಕರ್ತ ಹಾಗೂ ಪರಿಸರಾಸಕ್ತ ಉದಯ ಸಾಗರ್‌

ಸಾಗರದ ಕಾರ್ಗಲ್‌ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಸ್ಥಳ ಇಷ್ಟು ವರ್ಷಗಳ ಕಾಲ ನಾನಾ ಕಾರಣಗಳಿಂದ ಮೂಲ ಸೌಕರ್ಯ ಅಭಿವೃದ್ಧಿ ವಂಚಿತ ಹಾಗೂ ಅಧ್ಯಯನವಿಲ್ಲದೇ ದುರಂತಕ್ಕೆ ಸಾಕ್ಷಿಯಾಗಿದೆ. ಹದಿನೈದು ದಿನಗಳ ಹಿಂದೆ ನೀರಿನ ಇಳಿಕೆ ಕಂಡ ಇಲಾಖೆ, ಆಹಾರ ಸಮಸ್ಯೆ ತಲೆದೋರಬಹುದು ಎಂದು ಸುಮಾರು ೭೦ ಸಾವಿರ ಮೀನಿನ ಮರಿಗಳನ್ನ ಬಿಟ್ಟಿದೆ. ಆದರೆ ನೀರೇ ಇಲ್ಲದೇ, ಚರಂಡಿ ಹೊಲಸಿನಂತೆ ಹಸಿರು ಬಣ್ಣಕ್ಕೆ ತಿರುಗಿರುವ ನೀರಿನಲ್ಲಿ ಮೀನುಗಳು ಹೇಗೆ ಬದುಕಬಲ್ಲವು..? ಅವುಗಳನ್ನೇನಾದರೂ ತಿಂದಿದ್ದರೆ, ಕಲುಷಿತಗೊಂಡ ಆಹಾರ-ನೀರೇ ಮಾರಕವಾಗಿರಬಹುದು. ಹಕ್ಕಿ ಜ್ವರದ ಯಾವುದೇ ಕುರುಹುಗಳಿವೆಯಾ ಎಂಬುದರ ಬಗ್ಗೆಯೂ ಪರೀಕ್ಷೆಯಾಗಬೇಕು. ಆದರೆ ರಾಜಕಾರಣಿಗಳು ಹಾಗೂ ಇಲಾಖೆ ಅಷ್ಟು ಆಸಕ್ತಿ ತಳೆದಿಲ್ಲ.

ಗುಡವಿ ಪಕ್ಷಿಧಾಮದ ಕೆರೆಯ ಮೇಲೆ ಸ್ವಲ್ಪ ಮರ-ಗಿಡಗಳಿವೆ. ಶ್ರೇಷ್ಠ ಪ್ರವಾಸಿತಾಣವಾಗುವ ಎಲ್ಲಾ ಸಾಧ್ಯತೆಗಳಿವೆ. ಸಾಲದು ಎಂಬಂತೆ ಕದಂಬರ ಬನವಾಸಿಗೆ ತೆರಳುವ ಹೆದ್ದಾರಿಗೆ ಸಮೀಪವೇ ಇದೆ. ಸೊರಬದಲ್ಲಿ ನಿರಂತರ ಕಾಡು ನಾಶ, ಪೂರ್ಣ ಬಯಲು ಸೀಮೆಯಾಗುತ್ತಾ ಸಾಗಿದೆ. ಉಳಿದೊಂದು ಪಕ್ಷಿಧಾಮ ಈ ಅರೆಮಲೆನಾಡಿನ ಘನತೆ ಉಳಿಸಬಹುದು, ಆಸಕ್ತಿ ಬೇಕಷ್ಟೇ..!

You Might Also Like This