ನಾಡಿಗೆ ವಿದ್ಯುತ್ ನೀಡಲು ಮುಳುಗಡೆಯಾದವರು ಶಿವಮೊಗ್ಗ ಜಿಲ್ಲೆಯ ನಾನಾ ಭಾಗದಲ್ಲಿ ದಯಾನೀಯ ಸ್ಥಿತಿಯಲ್ಲಿದ್ದಾರೆ. ಮನೆಯಿಲ್ಲ, ಹಕ್ಕುಪತ್ರಗಳಿಲ್ಲ, ಶಿಕ್ಷಣ-ಆರೋಗ್ಯ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಆದರೆ ವಿದ್ಯುತ್ ಕೂಡ ಇಲ್ಲ ಎಂದರೆ ಎಂಥಹ ವಿಪರ್ಯಾಸ..!
ಮುಳುಗಡೆ ಜನರನ್ನ ಆರು ದಶಕಗಳ ಹಿಂದೆ ದುರ್ಗಮ ಕಾಡಿನಲ್ಲಿ ಬಿಟ್ಟು ಬಂದ ಸರ್ಕಾರ ಈ ತನಕ ತಿರುಗಿ ನೋಡಿದ್ದೇ ಇಲ್ಲ. ಅವರೆಲ್ಲಾ ಈಗಲೂ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಅಂತಹದೊಂದು ಬದುಕಿನ ಚಿತ್ರಣ ಇಲ್ಲಿದೆ.
ಸಾಗರ ತಾಲೂಕಿನ ಭಾನುಕುಳಿ ಗ್ರಾಮ ಪಂಚಾಯತಿ. ಸಾಲಕೋಡ್ಲು, ಚೀಕನಹಳ್ಳಿ ಹಾಗೂ ಹೆಬ್ಬಿನಕೇರಿ ಗ್ರಾಮಗಳು. ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಮುಳುಗಡೆಯಾಗಿ ಬಂದ 56 ಕುಟುಂಬಗಳು ಈ ಮೂರು ಗ್ರಾಮಗಳಲ್ಲಿವೆ. ಈ ಕುಟುಂಬಗಳಿಗೆ ವಿದ್ಯುತ್, ರಸ್ತೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ದೀಪದ ಕೆಳಗೆ ಕತ್ತಲು ಎಂಬ ಮಾತು ಇವರಿಗೆ ಅಕ್ಷರಶಹಃ ಅನ್ವಯಿಸುತ್ತದೆ. ಇಲ್ಲಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿ ರಾಜ್ಯಕ್ಕೆ ಶೇಕಡಾ 25 ರಷ್ಟು ವಿದ್ಯುತ್ ಪೂರೈಕೆ ಮಾಡುವ ಶರಾವತಿ ವಿದ್ಯುದಾಗಾರವಿದೆ. ಆದರೆ ಈ ಮೂರು ಹಳ್ಳಿಗಳಿಗೆ ಮಾತ್ರ ಇದುವರೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೇಗೋ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡಿದ್ದಾರೆ. ಆದರೆ ಇಂತಹ ಗೋಂಡಾರಣ್ಯದಲ್ಲಿ ಬಿಸಿಲು ಕಾಣುವುದಾದರೂ ಹೇಗೆ..? ದೀಪದ ಬೆಳಕೇ ಈ ಗ್ರಾಮದ ಜನರಿಗೆ ಆಧಾರ. ಹಿಂದೆ ನ್ಯಾಯಬೆಲೆ ಅಂಗಡಿಯಲ್ಲಿ ನೀಡುತ್ತಿದ್ದ ಸೀಮೆಎಣ್ಣೆಯಿಂದ ದೀಪ ಉರಿಸುತ್ತಿದ್ದರು.
ಆದರೆ ಈಗ ಸೀಮೆಎಣ್ಣೆ ವಿತರಣೆಯೇ ಇಲ್ಲವಾಗಿದೆ. ಹೀಗಾಗಿ ಡೀಸೆಲ್ ಬಳಸಿ ದೀಪ ಉರಿಸುವ ಸ್ಥಿತಿ ಇದೆ. ಸ್ವತಂತ್ರ ಬಂದು 75 ವರ್ಷಗಳಾದರೂ ಈ ಗ್ರಾಮಗಳಿಲ್ಲ ಮೂಲಸೌಕರ್ಯವಿಲ್ಲ. ಅರಣ್ಯದೊಳಗೆ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಯೋಜನೆ ಮಾಡಿದರು ಕತ್ತಲಲ್ಲೇ ಬದುಕು ಸಾಗಿಸುತ್ತಾರೆ. ಈ ಜನರು ತಾಲೂಕು ಕೇಂದ್ರ ಸಾಗರಕ್ಕೆ ಹೋಗಲು 75 km ಹಾಗೂ ಜಿಲ್ಲಾ ಕೇಂದ್ರ ತಲುಪಲು 150 ಕಿಲೋ ಮೀಟರ್ ದೂರ ಕ್ರಮಿಸಬೇಕು. ಬಸ್ ಸಂಪರ್ಕಕ್ಕೆ ಬರಲು, ಡಾಂಬಾರು ರಸ್ತೆ ಕಾಣಲು ಹತ್ತಾರು ಕಿಲೋಮೀಟರ್ ನಡೆದೇ ಸಾಗಬೇಕು. ಈ ಹಳ್ಳಿಗಳು ಶರಾವತಿ ವನ್ಯಜೀವಿ ವಲಯದೊಳವೆ ಬರುತ್ತವೆ. ಅರಣ್ಯ ಇಲಾಖೆ ಜತೆ ನಿತ್ಯ ಸಂಘರ್ಷ, ನೀರು-ಬೆಳಕು ಕಾಣದ ವಿಭಿನ್ನ ಪ್ರಪಂಚದಲ್ಲಿ ಜೀವಿಸುವ ಈ ಜನರ ಕಷ್ಟಕ್ಕೆ ಈ ತನಕ ಜನಪ್ರತಿನಿಧಿಗಳೂ ಸಹ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಸಾಯೋದರೊಳಗೆ ತಮ್ಮ ಮೊಮ್ಮಕ್ಕಳ ಭವಿಷ್ಯ ಉಜ್ವಲವಾಗುವ ಭರವಸೆ ಸಿಗುತ್ತಾ ಎಂಬ ಆತಂಕದಲ್ಲಿ ಹಿರಿಯರು ದಿನದೂಡುತ್ತಿದ್ದಾರೆ. ಈ ಹಳ್ಳಿಗಳು ವನ್ಯಜೀವಿ ವಲಯದಲ್ಲಿ ಇರುವುದರಿಂದಲೂ ಸಹ ಸಾಕಷ್ಟು ಕಾನೂನು ತೊಡಕುಗಳಿವೆ. ಜನರ ಸಮಸ್ಯೆಗಳನ್ನ ಶಾಶ್ವತವಾಗಿ ಪರಿಹಾರ ಮಾಡಲು ಕ್ರಮ ಕೈಗೊಳ್ಳಬೇಕಿದೆ.