Rain Land

Ode to the west wind

Join Us on WhatsApp

Connect Here

ಕೌಲುದುರ್ಗ (ಕವಿಲೇದುರ್ಗ) ಎಂಬ ಅಭೇದ್ಯ ಕೋಟೆ:

WhatsApp
Facebook
Twitter
LinkedIn

ನಮ್ಮ ಭಾರತದಲ್ಲಿ ಸಾವಿರಾರು ಕೋಟೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವು ಮಾತ್ರ ಐತಿಹಾಸಿಕವಾಗಿದ್ದು ಅಲ್ಲಿ ಈ ಹಿಂದೆ ಘಟಿಸಿದ ಘಟನೆಗಳಿಂದ ಇತಿಹಾಸದ ಪುಟಗಳಲ್ಲಿ ಮತ್ತು ಜನರ ಮನಸ್ಸಿನಲ್ಲಿ ಇವುಗಳ ಹೆಸರು ಶಾಶ್ವತವಾಗಿ ಅಚ್ಚು ಹೊಡೆದಂತೆ ಉಳಿದಿದೆ.

ಇನ್ನೂ ಈ ಕೋಟೆಗಳ ಹೆಸರು ಸಹ ಅರ್ಥ ಪೂರ್ಣವಾಗಿರುತ್ತದೆ. ಕೆಲವು ಆ ಸ್ಥಳದ ಹೆಸರಿನ ಜೊತೆಗೆ ಮೆಲುಕು ಹಾಕಿಕೊಂಡರೆ ಇನ್ನು ಕೆಲವು ಆ ನೆಲದ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಸೂಚಿಸುತ್ತದೆ. ಆದರೆ ನಮ್ಮ ಮಲೆನಾಡಿನ ಒಂದು ಕೋಟೆಗೆ ಈ ನೆಲದ ಶ್ರೇಷ್ಠ ಮತ್ತು ವಿಶೇಷ ಸ್ವಭಾವ ಹೊಂದಿರುವ ಮಲ್ನಾಡಗಿಡ್ಡ ಎಂಬ ತಳಿಯ ಮೇಲೆ ಹೆಸರಿಡಲಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಮಳೆಕಾಡಿನ ಬೆಟ್ಟ ಗುಡ್ಡ ಕಾನನದ ಪರಿಸರದಲ್ಲಿ ಇರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗ ಕೋಟೆಯೇ ನಮ್ಮ ದೇಶೀ ತಳಿಯನ್ನು ಸೂಚಿಸುವ ಐತಿಹಾಸಿಕ ಮತ್ತು ದೊಡ್ಡ ಇತಿಹಾಸ ಉಳ್ಳ ಕೋಟೆಯಾಗಿದೆ.

ಮಹಾಭಾರತದಲ್ಲಿ ವರ್ಣಿತವಾದ ಪಾಂಡವರ ವನವಾಸ ಮಾಡಿದ ಕಾಮ್ಯಕವನ ಇಂದಿನ‌ ಕವಲೇದುರ್ಗ ಕೋಟೆ. ದೌಮ್ಯ (ದ್ಯೂಮ್ನ) ಋಷಿಗಳು ಮತ್ತು ಇನ್ನಿತರೆ ಸಂತರು ತಪಸ್ಸುಗೈದ ಈ ತಪೋಭೂಮಿಯಲ್ಲಿ ಹೇರಳವಾಗಿ ಸ್ಥಳೀಯ ಕಪಿಲೆ ಅಂದರೆ ಕೌಲು ದನಗಳು ಮೇಯಲು ಬರುತ್ತಿದ್ದ ಕಾರಣಕ್ಕೆ ಇಲ್ಲಿ ನಿರ್ಮಿಸಿದ ಕೋಟೆಗೆ ಕಪಿಲೇದುರ್ಗ ಮತ್ತು ಕೌಲುದುರ್ಗ ಎಂಬ ಹೆಸರು ಪ್ರಚಲಿತವಾಗುತ್ತದೆ. ಇನ್ನೂ ಕಾಡು ಕವಿಲೆಗಳು ಅಂದರೆ   ಪ್ರಾಣಿಗಳು ಸಹಾ ಇಲ್ಲಿ‌ ವಾಸಿಸುತ್ತಿದ್ದ ಕಾರಣಕ್ಕೆ ಈ ಕೋಟೆಗೆ ಕವಿಲೇದುರ್ಗ ಎಂಬ ಹೆಸರು ಸಹಾ ಇದೆ. ಕೆಳದಿ ವೆಂಕಟಪ್ಪ ನಾಯಕರು ಈ ಕೋಟೆಯನ್ನು ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎನ್ನುವ ಹೆಸರಿನ ಸಹೋದರರನ್ನು ಸೋಲಿಸಿ ಈ ಕೋಟೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಾನೆ.

ಕರ್ಣಾಟ (ವಿಜಯನಗರ) ಸಾಮ್ರಾಜ್ಯದ ರಾಜಧಾನಿಯಲ್ಲಿ (ಹಂಪಿ) ಬೆಳೆದಿದ್ದ ವೆಂಕಟಪ್ಪ ನಾಯಕ ಅಲ್ಲಿಯ ಕೆಲವು ದೇವಾಲಯಗಳಲ್ಲಿ ಇರುವ ದೇವರ ಶಿಲಾಮೂರ್ತಿಗಳನ್ನು ಒಳಗೊಂಡ ಮಲೆನಾಡು ಶೈಲಿಯ ದೇವಾಲಯಗಳನ್ನು ಇಲ್ಲಿ ನಿರ್ಮಿಸುತ್ತಾನೆ. ದ್ರಾವಿಡ, ಹೊಯ್ಸಳ, ವಿಜಯನಗರ, ತುಳುನಾಡು ಮತ್ತು ಪರ್ಶಿಯನ್ ಮಿಶ್ರಿತ ವಿಶಿಷ್ಠವಾದ ವಾಸ್ತುಶಿಲ್ಪ ಶೈಲಿಯೇ ಈ ಮಲೆನಾಡು ಶೈಲಿ. ಒಂದು ಸುತ್ತಿನ ಕೋಟೆಯನ್ನು ಏಳು ಸುತ್ತಿನ ಕೋಟೆಯಾಗಿ ಪರಿವರ್ತಿಸಿ ಇದನ್ನು ಅಭೇದ್ಯ ಕೋಟೆಯನ್ನಾಗಿ ಮಾಡುತ್ತಾನೆ. ಐದು ಸುತ್ತಿನ ಕೋಟೆಯು ಗುಡ್ಡದ ಮೇಲಿದ್ದರೆ ಎರಡು ಸುತ್ತಿನ ಕೋಟೆ ಗುಡ್ಡದ ಕೆಳಗೆ ಇರುವ ಹಳ್ಳಿಯನ್ನು ಆವರಿಸಿತ್ತು (ಈಗ ಇದು ಕಣ್ಮರೆಯಾಗಿದೆ). ಈ ಕೋಟೆಗೆ ವೆಂಕಟಪ್ಪ ನಾಯಕರು ಇಟ್ಟ ಹೊಸ ಹೆಸರು “ಭುವನಗಿರಿದುರ್ಗ”. ಭುವನ‌ ಎಂದರೆ ಭೂಮಿ, ಗಿರಿದುರ್ಗ ಎಂದರೆ ಗುಡ್ಡದ ಮೇಲೆ ಇರುವ ಕೋಟೆ. ಈ ಕೋಟೆ ಗಿರಿದುರ್ಗ, ವನದುರ್ಗ‌ ಮತ್ತು ಅಂಟುಕೋಟೆ ಎಂಬ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ವರ್ಗಕ್ಕೆ ಸೇರುತ್ತದೆ. ೧೭೬೩ರಲ್ಲಿ (1763) ಕೆಳದಿ ಸಾಮ್ರಾಜ್ಯವನ್ನು ಸ್ವಾಧೀನ ಪಡಿಸಿಕೊಂಡ ಹೈದರ್ ಅಲಿ ಈ ಕೋಟೆಯ ಪರಿಸರವನ್ನು ಬಲಪಡಿಸಲು ಮುಂದಾಗುತ್ತಾನೆ.

ಮಲೆನಾಡಿನ ಪರಿಸರದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಹೈದರ್ ಕವಲೇದುರ್ಗದಲ್ಲಿ ಜನವಸತಿ ಹೆಚ್ಚಿಸಲು ಹತ್ತಿರದ ಆರಗದ ಜನರನ್ನು ಇಲ್ಲಿಗೆ ಸ್ಥಳಾಂತರ ಮಾಡಿಸುತ್ತಾನೆ. ಎತ್ತರದಲ್ಲಿ ಇರುವ ಈ ಗಿರಿಕೋಟೆಯಲ್ಲಿ ಉಸಿರಾಟದ ತೊಂದರೆಯಿಂದ ಜನರು ಕಾಯಿಲೆ ಬಿದ್ದಾಗ ತಾನು ಮಾಡಿದ ಎಡವಟ್ಟಿನ‌ ಅರಿವು ಹೈದರಿಗೆ ಆಗುತ್ತದೆ. ೧೮೦೦ರಲ್ಲಿ ಇಲ್ಲಿಗೆ ಆಗಮಿಸಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕಾನನ್ ಅವರು ಇಲ್ಲಿಯ ಸ್ಥಳೀಯರಿಂದ ತಿಳಿದುಗೊಂಡ ಮಾಹಿತಿಯನ್ನು ಈ ರೀತಿಯಾಗಿ ದಾಖಲಿಸಿದ್ದಾರೆ – ” About half way, I passed through a village named Arga, which formerly was a large place. Its inhabitants were removed by Hyder to Cowldurga, and suffered much from the change of air; for Arga is in clear open country, and Cowldurga is surrounded by hills and forests”.

ಇದರಿಂದ ನಮಗೆ ತಿಳಿಯುವ ವಿಷಯ ಏನೆಂದರೆ ಕೆಳದಿ ಅರಸರು ಕಷ್ಟದ ಕಾಲದಲ್ಲಿ ಈ ಕೋಟೆಯನ್ನು ಆಶ್ರಯಿಸುತ್ತಿದ್ದರು ಹೊರೆತು ಇದು ಎಂದಿಗೂ ಅವರ ರಾಜಧಾನಿ ಆಗಿರಲಿಲ್ಲ. ಕೆಳದಿಯ ನಂತರ ಇಕ್ಕೇರಿ ಮತ್ತು ಕೊನೆಯದಾಗಿ ಬಿದನೂರು ರಾಜಧಾನಿಯಾಗಿತ್ತು. ಬಿದನೂರಿನಿಂದ ನಾಲ್ಕು ಕೋಸು ದೂರದಲ್ಲಿ ಇರುವ ಕವಲೇದುರ್ಗ ಕೋಟೆಯಲ್ಲಿ ರಾಣಿ ಚೆನ್ನಮ್ಮ ಅವರ ಪಟ್ಟಾಭಿಷೇಕವಾದರೆ ಇದೆ ಕೋಟೆಯ ಕೆಳಗೆ ಇರುವ ತಿಮ್ಮಣ್ಣನಾಯಕನ ಕೆರೆಯ ದಂಡೆಯ ಮೇಲೆ ೧೬೮೯-೯೦ರಲ್ಲಿ ಕೆಳದಿ ಮತ್ತು ಔರಂಗಜೇಬನ ಸೈನ್ಯದ ಮಧ್ಯೆ ಐತಿಹಾಸಿಕ ಯುದ್ಧ ನಡೆದಿತ್ತು. ಇಲ್ಲಿ ಹೆಜ್ಜೆ ಹೆಜ್ಜೆಗು ಸಿಗುವ ಸಾವಿರಾರು ಸಂಖ್ಯೆಯ ವೀರಗಲ್ಲುಗಳು ಈ ರಣಘೋರ ಯುದ್ಧದ ಇತಿಹಾಸವನ್ನು ಸಾರುತ್ತವೆ. 

೧೮೦೦ರಿಂದ ೧೮೮೨ರ ವರೆಗೆ ನಗರ ಪ್ರಾಂತ್ಯದಲ್ಲಿ ಇರುವ ಪ್ರಮುಖ ಸೀಮೆಯ ತಾಲ್ಲೂಕು ಕೇಂದ್ರವಾಗಿದ್ದ  ಕವಲೇದುರ್ಗ ನಂತರದಲ್ಲಿ ತೀರ್ಥರಾಜಪುರ ಅಂದರೆ ತೀರ್ಥಹಳ್ಳಿಗೆ ತಾಲ್ಲೂಕು ಕೇಂದ್ರ ವರ್ಗಾವಣೆಯಾದ ನಂತರ ತನ್ನ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತದೆ.

ನಮ್ಮ ಕರ್ನಾಟಕದಲ್ಲಿ ಹಳ್ಳಿಕಾರ, ಅಮೃತಮಹಲ್, ಖಿಲಾರಿ, ದೇವಣಿ ಮತ್ತು ಮಲ್ನಾಡಗಿಡ್ಡ ತಳಿಗಳು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಕಡಿಮೆ ಆಹಾರ ಸೇವನೆ, ಅಧಿಕ ರೋಗ ನಿರೋಧಕ ಶಕ್ತಿ, ಗಟ್ಟಿಯಾದ ಗೊರಸುಗಳಿಂದಾಗಿ ಕಲ್ಲು ಮಣ್ಣು, ಗುಡ್ಡ-ಬೆಟ್ಟಗಳ ತುದಿಯವರೆಗೆ ಸುಲಭವಾಗಿ ಚಲಿಸುವ ಸಾಮರ್ಥ್ಯ, ಮೈ ಕಂಪಿಸುವುದು, ಸದಾ ಮೈ ಸ್ವಚ್ಛ ಇಟ್ಟುಕೊಳ್ಳುವುದು, ಉದ್ದ ಬಾಲದಿಂದಾಗಿ ದೇಹದ ಎಲ್ಲ ಭಾಗಕ್ಕೂ ಜಾಡಿಸಿ ಪರಾವಲಂಬಿ ಜೀವಿಗಳ ಉಪಟಳವನ್ನು ತಪ್ಪಿಸಿಕೊಳ್ಳುವ ಗುಣವನ್ನು ಮಲ್ನಾಡಗಿಡ್ಡದಲ್ಲಿ ಕಾಣಬಹುದು.‌ ಹಾಲುಕೊಂಬಿನ (ಅಲುಗಾಡುವ ಕೋಡು) ದನ ಹಾಗೂ ಕಪಿಲೆ (ಕೌಲು) ವರ್ಣದ ಕಾಜು ಕಣ್ಣಿನ ದನಗಳು ಈ ತಳಿಯ ಎರಡು ವಿಭಿನ್ನ ಪ್ರಬೇಧಗಳು. ಕಪ್ಪು, ಕೆಂಪು, ಬಿಳಿ, ಬೂದು, ಕಪ್ಪುಹಂಡ ಹಾಗೂ ಕೆಂಪುಹಂಡ ಬಣ್ಣ ಸಾಮಾನ್ಯವಾದರೆ ಕಪಿಲೆ (ಕೌಲು) ಬಣ್ಣ ವಿರಳ ಮತ್ತು ನೋಡಲು ಬಹಳ ಆಕರ್ಷಣೀಯ. ಸಾಕಷ್ಟು ವಿಶೇಷ ಸ್ವಾಭವ ಮತ್ತು ಔಷಧೀಯ ಗುಣವುಳ್ಳ ಹಾಲನ್ನು ಕರುಣಿಸಿವ ಮಲ್ನಾಡಗಿಡ್ಡ ತಳಿಗಳ ಸಂತತಿ ಕಡಿಮೆ ಆಗುತ್ತಾ ಅಳಿವಿನ ಅಂಚಿನಲ್ಲಿದ್ದರೆ ಇತ್ತಾ ಅದರ ಹೆಸರು ಸೂಚಿಸುವ ಕವಲೇದುರ್ಗ (ಕೌಲದುರ್ಗ) ಕೋಟೆಯು ಸಹ ಸರಿಯಾದ ನಿರ್ವಹಣೆ ಇಲ್ಲದೆ ತನ್ನ ಕೊನೆಯ ಕ್ಷಣವನ್ನು ಎದುರು ನೋಡುತ್ತಿದೆ. ಮಲ್ನಾಡಗಿಡ್ಡ ಮತ್ತು ಕವಲೇದುರ್ಗ ಕೋಟೆ ಸಂಪೂರ್ಣವಾಗಿ ಕಣ್ಮರೆಯಾಗುವ ಮುಂಚಿತವಾಗಿಯೇ ನಾವುಗಳು ಇದನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ.

ಚಿತ್ರಗಳು/ಲೇಖನ
©ಅಜಯ್ ಕುಮಾರ್ ಶರ್ಮಾ.

You Might Also Like This