ಶಿವಮೊಗ್ಗದಲ್ಲಿ ಪ್ರಕೃತಿ ಪ್ರಿಯರಿಗೆ ಮುದ ನೀಡುವ ಸಾಕಷ್ಟು ಸ್ಥಳಗಳಿವೆ. ಇಂದಿಗೂ ಪ್ರವಾಸಿಗರ ಉಪಟಳದಿಂದ ದೂರನೇ ಉಳಿದಿವೆ. ಈಗೆಲ್ಲಾ ಪ್ರವಾಸಿಗರ ಅಭಿರುಚಿ ಬದಲಾದ್ದರಿಂದ ಹಾಗೂ ಪ್ರವಾಸಿತಾಣಗಳನ್ನ ವಿಕೃತಗೊಳಿಸುವ ಮನಸ್ಥಿತಿ ಹೊಂದಿರೋದ್ರಿಂದ ಅವುಗಳು ಹೀಗೆ ಇದ್ದರೇ ಒಳಿತು ಅನಿಸುತ್ತೆ.’
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಮಲೆನಾಡು ಪರಿಸರಕ್ಕೆ ಉತ್ತಮ ಉದಾಹರಣೆ. ಈ ತಾಲೂಕಿನಲ್ಲಿ ಸಿಗುವ ಪ್ರಾಕೃತಿಕ ಸೊಬಗು ಬೇರೆಡೆ ಸಿಗೋದಿಲ್ಲ. ತೀರ್ಥಹಳ್ಳಿ ಹಾಗೂ ಸ್ವಲ್ಪ ಮಟ್ಟಿನ ಸಾಗರವೂ ಸಹ ಮಲೆನಾಡಿನ ಪ್ರಾಕೃತಿಕ ಸೊಬಗನ್ನೇ ಹೊಂದಿದ್ದರೂ ಸಹ ಹೊಸನಗರ ಘಟ್ಟ ಪ್ರದೇಶ..! ಮಳೆಗಾಲ ಬಂತೆಂದರೆ ಸ್ವರ್ಗ ಸಾದೃಶ್ಯ ವಾತಾವರಣ ನಿರ್ಮಾಣವಾಗುತ್ತದೆ. ಬಹಳ ಮುಖ್ಯವಾಗಿ ನಾವು ಗಮನಿಸಬೇಕಿರುವ ಅಂಶವೆಂದರೆ ಹೊಸನಗರದ ಹುಲಿಕಲ್ ಹಳ್ಳಿ ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ..!
ಹೊಸನಗರ ಎಂದ ತಕ್ಷಣ ಜನರಿಗೆ ನೆನಪಾಗೋದು ಕೊಡಚಾದ್ರಿ ಬೆಟ್ಟ..! ಪ್ರತಿ ದಿನ ನೂರಾರು ಜನರು ಇಲ್ಲಿಗೆ ಚಾರಣ ಬರುತ್ತಾರೆ. ಶೇ.೫೦ರಷ್ಟು ಜನರು ಕೇರಳದವರು ಎಂಬುದೂ ಸಹ ವಿಶೇಷ..! ಕಾರಣ ಸಮೀಪವೇ ಇರುವ ಕೊಲ್ಲೂರು ಮೂಕಾಂಬಿಕೆ ದೇಗುಲ. ಸದ್ಯ ನಾವು ಕೊಡಚಾದ್ರಿ ತಪ್ಪಲಿನ ಹಿಡ್ಲುಮನೆ ಫಾಲ್ಸ್ ಬಗ್ಗೆ ತಿಳಿದುಕೊಳ್ಳೋಣ..! ಈ ಭಾಗದಲ್ಲಿ ಸುತ್ತಾಡಬೇಕು ಎಂದರೆ ಒಂದು ದಿನದ ಯೋಜನೆ ಸಾಕಾಗದು..! ಇಲ್ಲಿ ಸಮೀಪದವಿರುವ ಕೆಲವು ಅಧಿಕೃತ ಅಥವಾ ಅನಧಿಕೃತ ಹೋಂಸ್ಟೇಗಳಲ್ಲಿ ಉಳಿದುಕೊಂಡು ಮುಂಜಾನೆಯಿಂದಲೇ ಸುತ್ತಾಟ ಆರಂಭಿಸಬೇಕು. ಕೊಡಚಾದ್ರಿ ಬೆಟ್ಟ ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದೊಳಗೆ ಬರೋದ್ರಿಂದ ಸಹಜವಾಗಿ ಅರಣ್ಯ ಇಲಾಖೆಯಿಂದ ನಿರ್ಬಂಧಗಳಿವೆ. ಸಂಜೆಯಾಗುತ್ತಲೇ ಕೊಡಚಾದ್ರಿ ಬೆಟ್ಟದಿಂದ ಕೆಳಗಿಳಿಯಬೇಕು.
ಕೊಡಚಾದ್ರಿ ಬೆಟ್ಟದಲ್ಲಿ ಜನ್ಮತಳೆದ ಅನೇಖ ಜಲಪಾತಗಳಲ್ಲಿ ಹಿಡ್ಲುಮನೆ ಫಾಲ್ಸ್ ಕೂಡ ಒಂದು. ಆದರೆ ಬೇರೆಲ್ಲಾ ಜಲಪಾತಗಳಿಗೆ ಹೋಲಿಸಿದರೆ ಇದು ಭಿನ್ನ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ತರಹದ ಜಲಪಾತಗಳನ್ನ ನಾವು ಕಾಣಬಹುದು. ನಿಟ್ಟೂರಿನಿಂದ ಸ್ವಲ್ಪ ಹಿಂದೆ ಹಿಡ್ಲುಮನೆ ಫಾಲ್ಸ್‌ಗೆ ಹೋಗಲು ಸುಸಜ್ಜಿತ ಹಾದಿಯಿದೆ. ಹಳ್ಳಿ ರಸ್ತೆ, ಕೆಸರು, ಗುಂಡಿಗಳಂತೂ ಮಾಮೂಲು, ಅದನ್ನ ಸರಿಪಡಿಸಿ ಎಂದು ಹೇಳಲಾಗದು ಕಾರಣ ನಾವು ಪ್ರಯಾಣಿಸುತ್ತಿರೋದು ನಿಷೇಧಿತ ಅರಣ್ಯ ಪ್ರದೇಶ ಎಂಬ ಅರಿವು ಇರಬೇಕು. ಮೂರು ಕಿಲೋಮೀಟರ್ ಕ್ರಮಿಸಿದ ಮೇಲೆ ಅಲ್ಲೊಂದು ಚೂರು ಎಸ್‌ಸಿ ಕೋಟದಲ್ಲಾದ ಕಾಂಕ್ರೀಟ್ ರಸ್ತೆ ಕಾಣುತ್ತದೆ. ಅಲ್ಲೊಂದರ್ಧ ಕಿಲೋಮೀಟರ್ ಸಾಗಿದರೆ ಹಾದಿಯ ಕೊನೆ ಅಲ್ಲೊಂದು ಮನೆ ಸಿಗುತ್ತೆ. ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ರಶೀದಿ ಹಿಡ್ಕೊಂಡು ಕಟ್ಟೆ ಮೇಲೆ ಕೂತಿರ್ತಾರೆ ಅವರೇ ನಮಗೆ ಶುಲ್ಕ ಸಹಿತ ಹಿತ್ತಲ ಮಾರ್ಗ ತೋರಿಸ್ತಾರೆ. ನೀವೇನಾದರೂ ಜೂನ್, ಜುಲೈ ತಿಂಗಳಲ್ಲಿ ಬಂದ್ರೆ ಮಳೆ ನೀರಿಗೆ ಹೈರಾಣಾಗ್ತೀರಾ..! ಸ್ವಲ್ಪ ಬಿಸಿಲು ಬಿಟ್ಟಿದ್ದೇ ಆದರೆ ಫೋಟೋ ತೆಗೆದುಕೊಳ್ಳಲೂ ಸಹ ನಿಮಗೆ ಸಮಯ ಸಿಗೋದಿಲ್ಲ.
ಹಿತ್ತಲ ಮಾರ್ಗದಿಂದ ಸಾಗಿದ ಹಾದಿ ಕಾಡಿನೊಳಗೆ, ಕಿರು ತೊರೆಯ ನೀರಲ್ಲಿ ಸಂಚರಿಸಿ ಆಗಾಗ ಪಕ್ಕದ ದಿಬ್ಬ ಹತ್ತಿ ಇಳಿದು ಜಲಪಾತದ ಶಬ್ದದ ಜಾಡು ಹಿಡಿದು ಇಪ್ಪತ್ತು ನಿಮಿಷ ಸಾಗಿದರೆ ಸಿನಿಮಾ ದೃಶ್ಯ ವೈಭವ ಕಣ್ಮುಂದೆ ಸಿಗುತ್ತೆ. ಎತ್ತರದಿಂದ ಬಂಡೆಗಳ ಮಧ್ಯೆ ಧುಮ್ಮಿಕ್ಕುವ ಜಲಪಾತದ ಬುಡದಲ್ಲೂ ಯಾವುದೇ ಅಪಾಯವಿಲ್ಲ…! ಆದರೆ ಕಡಿದಾದ ಹಾದಿಯಲ್ಲಿ ಸಾಗುವಾಗ ಮಾತ್ರ ಲಘು ಬಟ್ಟೆಗಳನ್ನ ಹಾಕಿಕೊಂಡು ವಸ್ತುಗಳನ್ನ ಭದ್ರವಾಗಿಟ್ಟುಕೊಂಡೇ ಸಾಗಬೇಕು. ಈ ಜಲಪಾತ ಹಲವು ಸೀಳುಗಳಲ್ಲಿ ಕಾಣಿಸಿಕೊಳ್ಳುತ್ತೆ. ಪ್ರವಾಸಿಗರು ಜಲಪಾತದ ಬುಡದಲ್ಲಿ ನಿಂತು ಖುಷಿ ಪಡ್ತಾರೆ. ಕೆಲವರು ತಿಳಿ ನೀರಿನಲ್ಲಿ ಈಜಾಡುತ್ತಾರೆ. ವಾಲಿಬಾಲ್ ತಂದು ಇಲ್ಲಿ ಆಡುವವರನ್ನೂ ಸಹ ನಾನು ನೋಡಿದ್ದೇನೆ. ಕುಟುಂಬ ಸಮೇತರಾಗಿಯೂ ಇಲ್ಲಿಗೆ ಬರಬಹುದು ಆದರೆ ಮಳೆಗಾಲದಲ್ಲಿ ತುಸು ಕಷ್ಟ..! ಚಳಿಗಾಲದಲ್ಲಿಯೂ ಸಹ ಇದರ ಸೊಬಗನ್ನ ಕಣ್ತುಂಬಿಕೊಳ್ಳಬಹುದು. ಇದು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ದುಮಾರು ೧೧೦ ಕಿಲೋಮೀಟರ್, ಹೊಸನಗರದ ಪಟ್ಟಣದಿಂದ ಮೂವತ್ತು ಕಿಲೋಮೀಟರ್ ಅಂತರದಲ್ಲಿದೆ.