Ode to the west wind

Join Us on WhatsApp

Connect Here

ಸಾಗರ ಪಟ್ಟಣದ ಕೆರೆಯಲ್ಲಿ ನೀರು ನಾಯಿಗಳ ಹಿಂಡು, ಯಾರು ಕರೆತಂದರಿಲ್ಲಿಗೆ..?

WhatsApp
Facebook
Twitter
LinkedIn

ಬಹಳ ಹಿಂದೆ, ಸುಮಾರು ಹತ್ತು ವರ್ಷಗಳಾಚೆ ಶರಾವತಿ ಹಾಗೂ ತುಂಗಾ ನದಿ ತೀರದಲ್ಲಿ ನೀರುನಾಯಿಗಳು ಇವೆಯಂತೆ ಎಂಬುದು ಬಹಳ ದೊಡ್ಡ ಸುದ್ದಿ..! ಆದ್ರೀಗ ಸಾಗರದ ಪಟ್ಟಣದ ಗಣಪತಿ ಕೆರೆಯಲ್ಲೂ ಇವೆ ಎಂದು ಸುದ್ದಿಯಾಗುತ್ತಿದ್ದರೆ ಆಶ್ಚರ್ಯವಾಗದೇ ಇರಲಾರದು.!

ನೀರು ನಾಯಿಗಳನ್ನ ಇಂಗ್ಲೀಷ್‌ನಲ್ಲಿ ಓಟರ್‌ ಎಂದು ಸಂಬೋಧಿಸಲಾಗುತ್ತೆ. ಈ ಪ್ರಬೇಧದಲ್ಲಿ ನಾನಾ ವಿಧಗಳಿವೆ ಹಾಗೂ ಪದಪುಂಜಕ್ಕೂ ಸಹ ಹಿನ್ನೆಲೆ ಇದೆ. ಅವೆಲ್ಲ ಬಿಟ್ಟು ನೀರು ನಾಯಿಗಳ ಸ್ವಭಾವನ್ನ ನೋಡೋದಾದರೆ ಸಹಜ ನಾಯಿಗಳ ದೇಹ ರಚನೆ ಇವಕ್ಕೆ ಇರುವುದೇ ಇಲ್ಲ. ನೀರಿನಲ್ಲಿ ಧೀರ್ಘಕಾಲ ದೇಹ ಮುಳುಗಿಸಿಡಬಹುದಾದ ರಚನೆ ಇದ್ದು ಉಭಯ ವಾಸಿಗಳಂತೆ ಇರುತ್ತವೆ. ಮೀನುಗಳು ಎಥೇಚ್ಛವಾಗಿ ಲಭ್ಯವಾಗುವ ಸ್ಥಳದಲ್ಲಿ ಬೀಡು ಬಿಡುವ ನೀರು ನಾಯಿಗಳು ಮೀನಿನ ಕುರುಹುಗಳೇ ಇಲ್ಲದ ಹಾಗೇ ತಿಂದು ಹಾಕುತ್ತವೆ. ಇವುಗಳ ಜೀವ ಶೈಲಿಯೇ ವಿಚಿತ್ರ. ಸ್ವಭಾವತಃ ಅಂಜಿಕೆ ಪ್ರಾಣಿಗಳಾಗಿದ್ದು ಅಳಿವಿನಂಚಿನ ಪ್ರಬೇಧದಲ್ಲೇ ಗುರುತಿಸಿಕೊಂಡಿವೆ.

ಶಿವಮೊಗ್ಗದ ಮಟ್ಟಿಗೆ ನೀರು ನಾಯಿಗಳನ್ನ ಶರಾವತಿ ಹಿನ್ನೀರಿನಲ್ಲಿ ಅದರಲ್ಲೂ ಹೊಸನಗರದ ಬದಿ ಕಾಣಬಹುದು. ಬೆಕ್ಕೋಡಿ, ಬಿಲ್‌ಸಾಗರದಂತಹ ಪ್ರದೇಶದಲ್ಲಿ ಇವುಗಳ ಕಣ್ಣಾಮುಚ್ಚಾಲೆ ಸೆರೆ ಹಿಡಿಯಲು ವಿಶ್ವಶ್ರೇಷ್ಠ ಫೋಟೋ‌ಗ್ರಾಫರ್‌ಗಳೂ ಸಹ ಹರಸಾಹಸ ಪಡುತ್ತಾರೆ. ಮೀನು ತಿಂದರಗಿಸಿಕೊಳ್ಳಲು ದಿಂಬಕ್ಕೆ ಬರುತ್ತವೆ ಅಥವಾ ಮೀನುಗಾರರ ಉಕ್ಕಡ, ದೋಣಿಗಳಲ್ಲೇ ಮಲಗುತ್ತವೆ. ಹೊಳೆ, ನದಿ ಮಧ್ಯೆ ಮಣ್ಣು ಗುಡ್ಡ ಅಥವಾ ಕಲ್ಲು ಬಂಡೆಯ ಮೇಲೆ ಇಣುಕಿ ನೋಡುವ ಶೈಲಿ ಸೆರೆಸಿಕ್ಕರೆ ಫೋಟೋಗ್ರಾಫರ್‌ಗೆ ಅದ್ಭುತ ಕ್ಷಣ..! ಹೀಗಿರುವ ನೀರು ನಾಯಿಗಳು ಹಿಂಡು ಹಿಂಡಾಗಿ ಸಾಗರ ಪಟ್ಟಣದಲ್ಲಿನ ಗಣಪತಿ ಕೆರೆಯಲ್ಲಿ ಮೂವತ್ತೂಕ್ಕೂ ಅಧಿಕ ಸಂಖ್ಯೆಲ್ಲಿ ಬೀಡು ಬಿಟ್ಟಿರುವುದು ಹಲವು ಪ್ರಶ್ನೆಗಳನ್ನ ಎತ್ತಿದೆ..!

ಸಾಗರದ ಗಣಪತಿ ಕೆರೆ ಸುಮಾರು ೨೫ ಎಕರೆ ವಿಸ್ತೀರ್ಣದಲ್ಲಿದೆ. ಹಿಂದೆ ಹಾವಸೆ, ಕೊಳಚೆಯಿಂದ ಮುಚ್ಚಿ ಹೋಗಿದ್ದ ಕೆರೆಗೆ ಈಗ ಕಾಯಕಲ್ಪ ಮಾಡಲಾಗಿದೆ. ತಿಳಿ ನೀರಿನಿಂದ ಕಂಗೊಳಿಸುತ್ತಿರುವ ಕೆರೆ ಭೂ ಕಬಳಿಕೆಗೂ ಬಲಿಯಾಗಿತ್ತು. ಅದಿನ್ನೂ ನ್ಯಾಯ ಸಮ್ಮತವಾದ ಸರ್ವೇ ಆಗದೇ ಪರಿಸರಾಸಕ್ತರ ಆರೋಪವಾಗಿ ಹಾಗೇ ಉಳಿದಿದೆ. ಏನೇ ಇರಲಿ ಸ್ಥಳೀಯ ಶಾಸಕರ ಆಸಕ್ತಿಗೆ ಕೆರೆಗೆ ಬೆರಗು ಬಂದಿದೆ ಆದರೆ ದಿಢೀರ್‌ ಅಂತ ಈ ನೀರು ನಾಯಿಗಳ ಚಲನವಲನ ಜನರಿಗೆ ಖುಷಿ ಹಾಗೂ ಅಚ್ಛರಿ ತಂದಿದ್ದರೆ ಸಾಕಷ್ಟು ಜನರಿಗೆ ಅನುಮಾನ ಮೂಡಿಸಿದೆ.

ಈ ನಾಯಿಗಳು ಎಲ್ಲಿಂದ ಬಂದವು, ಯಾರಾದರೂ ತಂದು ಬಿಟ್ಟರಾ..? ಇಪ್ಪತ್ತೈದು ಎಕರೆ ಕೆರೆಯಲ್ಲಿ ಎಷ್ಟು ದಿನ ಇರಬಲ್ಲವು..? ಮೀನುಗಳು ಖಾಲಿಯಾದರೆ ಎತ್ತ ಪಯಣ ಬೆಳೆಸುತ್ತವೆ ಅದೂ ಜನನಿಬಿಡ ಪ್ರದೇಶದಲ್ಲಿ ಇವುಗಳ ಸಂಚಾರ ಹೇಗೆ ಎಂಬುದೇ ಮಿಲಿಯನ್‌ ಡಾಲರ್‍ ಪ್ರಶ್ನೆ. ಕೆಲವು ಬುದ್ಧಿವಂತರ ಪ್ರಕಾರ ಈ ನಾಯಿಗಳು ಶರಾವತಿ ಹಿನ್ನೀರಿನಿಂದಲೇ ಹಾರಿ ಬಂದಿವೆ ಅಂದರೆ ಹೈವೇಯನ್ನೂ ಕ್ರಮಿಸಿ, ವಾಹನ, ಜನರನ್ನೂ ಮೀರಿ ಬಂದಿವೆ..! ಸ್ವಲ್ಪ ಮಂದಿ ಇವುಗಳು ಮೂರು ನಾಲ್ಕು ತಿಂಗಳು ನೀರಿಟ್ಟುಕೊಳ್ಳುವ ವರದಾ ನದಿಯಿಂದ ಬಂದಿವೆ ಎನ್ನುತ್ತಾರೆ. ಹೀಗೆ ಆಗದಿರಲು ಹಲವು ಕಾರಣಗಳಿವೆ. ಪರಿಸರಾಸಕ್ತರೇನಾದರೂ ತಂದು ಬಿಟ್ಟರಾ..? ಅರಣ್ಯ ಇಲಾಖೆ ಸುರಿದು ಹೋದ್ರಾ ಎಂಬೆಲ್ಲಾ ಅನುಮಾನಗಳು ಮೂಡಿವೆ.

ಯಾರೇ ತರಲಿ ಅಥವಾ ಅವುಗಳೇ ಬರಲಿ, ನೀರು ನಾಯಿಗಳು ಸದಾ ತುಂಬಿಕೊಂಡಿರುವ ಗಣಪತಿ ಕೆರೆಯಲ್ಲಿ ಶಾಶ್ವತವಾಗಿಯೇ ನೆಲೆಸಲಿ..!

You Might Also Like This