ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು ಗಿರಿಗಳ ಧಾಮ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಸಾಲು ಗುಡ್ಡಗಳ ಶ್ರೇಣಿ ಆಕಾಶಕ್ಕೆ ಸವಾಲು ಒಡ್ಡಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ತಲೆ ಎತ್ತಿ ನಿಂತಿರುವ ಗಿರಿಗಳು ಚಾರಣಿಗರ ಪಾಲಿನ ಕಾಶಿ. ಕುದುರೆಮುಖ, ಕೆಮ್ಮಣ್ಣುಗುಂಡಿ, ಬಾಬಾ ಬುಡನ್ ಗಿರಿ, ನರಸಿಂಹ ಪರ್ವತ ಮತ್ತು ಮುಳ್ಳಯ್ಯನಗಿರಿ ಎಲ್ಲರಿಗೂ ತಿಳಿದಿರುವ ಗಿರಿಧಾಮಗಳು. ಆದರೆ ಮೇರುತಿ ಪರ್ವತ ಎಂಬ ಸೊಗಸಾದ ಗುಡ್ಡಗಾಡು ಪ್ರದೇಶ ಯಾರಿಗೂ ಹೆಚ್ಚಾಗಿ ಗೋಚರಿಸದೆ ಇರುವ ಅದ್ಭುತ ತಾಣ.

ಮೇರುತಿ ಅಂದರೆ ಎತ್ತರದ ಶಿಖರ ಆದರೆ ಸ್ಥಳೀಯರು ಇದನ್ನ ಮೇರ್ತಿ ಗುಡ್ಡ ಎಂದು ಕರೆಯುತ್ತಾರೆ. ಮೇರುತಿ ಪರ್ವತ ಕಳಸ ಪೇಟೆಯ ಹತ್ತಿರ ಇದೆ (13°17’33.9″N. latitude, 75°22’28.9″E). ನಮ್ಮ ರಾಜ್ಯದ ಏಳನೇಯ ಅತಿ ಎತ್ತರದ ಗಿರಿ ಮುಳ್ಳಯ್ಯನಗಿರಿ (6317 ft), ಕುದುರೆಮುಖ (6215 ft), ಬಾಬಾ ಬುಡನಗಿರಿ (6214 ft), ಕಳಹಟ್ಟಿ (6155 ft), ರುದ್ರಗಿರಿ (5692 ft), ಪುಷ್ಪಗಿರಿಯ (5625 ft) ನಂತರದಲ್ಲಿ ಬರುವುದೇ ಮೇರುತಿ ಪರ್ವತ. ಸಮುದ್ರ ಮಟ್ಟದಿಂದ 5451 ಅಡಿ ಎತ್ತರದಲ್ಲಿದೆ. ಮೇರುತಿ ಪರ್ವತ ಶಂಖದ ಆಕಾರದಲ್ಲಿ ಇದ್ದು ದಕ್ಷಿಣದಿಂದ ಉತ್ತರಕ್ಕೆ ಬೆಳೆಯುತ್ತ ಹೋಗುತ್ತದೆ. ಮೇರುತಿ ಪರ್ವತಕ್ಕೆ ಆಸರೆಯಾಗಿ ಪಕ್ಕದಲ್ಲೇ ಇನ್ನೂ ಐದು ಗುಡ್ಡಗಳಿವೆ. ಈ ಗುಡ್ಡಗಳನ್ನ ಎದುರು ವಾರೆ ಗುಡ್ಡ, ಆನೆಗುಡ್ಡ, ಕೂರ್ನೆ ಗುಡ್ಡ, ನೆಲ್ಲಿ ಕೊಟ್ಟ ದ್ವಾರೆ ಗುಡ್ಡ ಮತ್ತು ಕೋಟ್ಟನ್ ಕಲ್ಲವಾರೆ ಗುಡ್ಡ ಎಂದು ಕರೆಯುತ್ತಾರೆ. ಹತ್ತೊಂಬತ್ತನೆ ಶತಮಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಬ್ರಿಟೀಷ್ ಕಾಫಿ ಬೆಳೆಗಾರರ ಹಾವಳಿಗೆ ತುತ್ತಾಯ್ತು. ಪಶ್ಚಿಮ ಘಟ್ಟದ ಅರಣ್ಯದಲ್ಲಿ ಇದ್ದ ಸ್ಥಳೀಯ ಮರಗಳ ಮಾರಣಹೋಮ ನಡೆಸಿ ದೊಡ್ಡ ದೊಡ್ಡ ಕಾಫಿ ಎಸ್ಟೇಟ್ ಗಳನ್ನು ನಿರ್ಮಾಣ ಮಾಡಿದ್ರು. ಮೇರುತಿ ಪರ್ವತದ ಪರಿಸರದಲ್ಲಿ ಈ ಹಿಂದೆ ಇದ್ದ ದಟ್ಟವಾದ ಕಾನ್ (ಕಾನ್/ಕಾನನ ಅಂದರೆ ಅರಣ್ಯ) ಮತ್ತು ಶೋಲಾ ಹುಲ್ಲುಗಾವಲು ಪ್ರದೇಶದಲ್ಲಿಯೂ ಸಹ ಕಾಫಿ ಎಸ್ಟೇಟ್ ಗಳು ತಲೆ ಎತ್ತಿ ನಿಲ್ಲುತ್ತವೆ. ಇಂದಿಗೂ ಸಹಾ ಮೇರುತಿ ಪರ್ವತದ ಸುತ್ತಲೂ ಕಾಫಿ ಮತ್ತು ಟೀ ಎಸ್ಟೇಟ್ ಗಳನ್ನು ಕಾಣಬಹುದು. ಇವುಗಳಲ್ಲಿ ಬದನೆಕಾನ್ ಎಸ್ಟೇಟ್, ಕವನಹಳ್ಳ ಎಸ್ಟೇಟ್, ಸುಬ್ಬನಕುಡಿಗೆ ಎಸ್ಟೇಟ್, ಮೇರ್ತಿಕಾನ್ ಎಸ್ಟೇಟ್ ಮತ್ತು ಆಡಿನಕೆರೆ ಎಸ್ಟೇಟ್ ಗಳು ಪ್ರಮುಖವಾದವು.

ಹೇಗೆ ಏರುವುದು ಈ ಶಿಖರಗಳನ್ನ..?
ಈ ಶಿಖರಕ್ಕೆ ಹೋಗಲು ಒಟ್ಟು ನಾಲ್ಕು ಮಾರ್ಗಗಳಿದ್ದು ಅದರಲ್ಲಿ ಎರಡು ಖಾಸಗಿ ಎಸ್ಟೇಟ್ ನೊಳಗೆ ಹೋಗುವ ಮಾರ್ಗಗಳೂ ಸಹ ಇವೆ. ಮೇರ್ತಿಕಾನ್ ಎಸ್ಟೇಟ್ ಮತ್ತು ಬದನೆಕಾನ್ ಎಸ್ಟೇಟ್ ವ್ಯವಸ್ಥಾಪಕರು ಒಪ್ಪಿಗೆ ನೀಡಿದರೆ ಕಾಫಿ ತೋಟದ ಕಚ್ಚಾ ರಸ್ತೆ ಮೂಲಕ ಶಿಖರವನ್ನು ಸುಲಭವಾಗಿ ಏರಬಹುದು. ಇನ್ನೂ ಬೈಕ್ ಹೊಡೆಯುವರು ಬದನೆಕಾನ್ ಎಸ್ಟೇಟ್ ರಸ್ತೆಯಲ್ಲಿ ಚಲಿಸಿ ಮೇರುತಿ ಪರ್ವತದ ಕಡೆಗೆ ಇರುವ ಗೇಟ್ ಹತ್ತಿರ ಬೈಕ್ ನಿಲ್ಲಿಸಿ ಅಲ್ಲಿಂದ ಮುಂದೆ ಎರಡು ಕಿಲೋಮೀಟರ್ ಚಾರಣ ಮಾಡಿದರೆ ಮೇರುತಿ ಶಿಖರ ತಲುಪಬಹುದು. ಇದರ ಹೊರತಾಗಿಯೂ ಸ್ವಲ್ಪ ತ್ರಾಸದಾಯಕವಾದರೂ ಸಹ ಪ್ರಕೃತಿ ಆನಂದ ಆಸ್ವಾದಿಸುವ ಇಚ್ಛೆ ಇದ್ದರೆ ಮೇರುತಿ ಶಿಖರವನ್ನ ಕೆಳಗಿನಿಂದ ಮೇಲಕ್ಕೆ ಹತ್ತಲು ಕಾಡಿನ ರಸ್ತೆ ಇದೆ. ಬಸರಿಕಟ್ಟೆಯ ಕಾನ್ವೆಂಟ್ ಶಾಲೆಯ ಹಿಂಬದಿಯಿಂದ ಹತ್ತಲು ಪ್ರಾರಂಭಿಸಿದರೆ ಮಾರ್ಗ ಮದ್ಯದಲ್ಲಿ ಗುಹೆಯಲ್ಲಿ ಇರುವ ಗಣಪತಿಯನ್ನು ನಮಸ್ಕರಿಸಿ ನೇರವಾಗಿ ಶಿಖರವನ್ನು ತಲುಪಬಹುದು. ಮೇರುತಿ ಪರ್ವತದ ಜೊತೆಗೆ ಇತರೆ ಗುಡ್ಡಗಳ ಆನಂದವನ್ನು ಅನುಭವಿಸಬೇಕು ಎಂದರೆ ಲಲಿತಾದ್ರಿ ಕಡೆಯಿಂದ ಏರಬೇಕು. ನಾವುಗಳು ಮೇರುತಿ ಪರ್ವತ ಶಿಖರ ತಲುಪಲು ಆಯ್ಕೆ ಮಾಡಿದ ಮಾರ್ಗ ಕೊನೆಯದು.

ಆರೋಹಣ: ಬಾಳೆಹೊನ್ನೂರು ಕಳಸ ರಸ್ತೆಯಲ್ಲಿ ಭದ್ರಾ ನದಿಯ ತಟದಲ್ಲಿ ಇರುವ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯ ಪುಣ್ಯಕ್ಷೇತ್ರದ ಹಿಂಬದಿಯ ಗುಡ್ಡದಲ್ಲಿ ಸರಿಸುಮಾರು ಎರಡು ಕಿಲೋಮೀಟರ್ ಚಲಿಸಿದರೆ ಸಿಗುತ್ತದೆ ಲಲಿತಾದ್ರಿ. ಇಲ್ಲಿಗೆ ಬರುವ ರಸ್ತೆ ಕಿರಿದಾಗಿದ್ದು ವಾಹನ ಚಲಿಸುವಾಗ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ. ಲಲಿತಾದ್ರಿ ಎಸ್ಟೇಟ್ ಮಾಲೀಕರಾದ ಶ್ರೀ ಯೋಗಿಶ್ ಅವರು ಬಹಳ ಪ್ರೀತಿಯಿಂದ ನಮ್ಮನ್ನು ಬರ ಮಾಡಿಕೊಂಡು ಮಲೆನಾಡಿನ ಆತಿಥ್ಯ ನೀಡಿದರು. ಮೇರುತಿ ಚಾರಣಕ್ಕೆ ಹೋಗಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ ಶ್ರೀ ಯೋಗಿಶ್ ಅವರು ಸ್ಥಳೀಯರಾದ ಮತ್ತು ಅದರಲ್ಲೂ ವಿಶೇಷವಾಗಿ ಮೇರುತಿ ಪರ್ವತ ಪರಿಸರದ ಇಂಚಿಂಚು ಜಾಗದ ಜ್ಞಾನ ಹೊಂದಿದ್ದ ಶ್ರೀ ಕೃಷ್ಣ ಅವರು ನಮ್ಮ ಸಂಗಡ ಕಳಿಸಿಕೊಟ್ಟರು. ಕೃಷ್ಣಣ್ಣ ಅರವತ್ತರ ಆಸುಪಾಸಿನಲ್ಲಿ ಇದ್ದರು ಸಹ ಅವರ ದೈಹಿಕ ಸದೃಢತೆ ಎಂತಹ ಯುವಕರನ್ನೂ ನಾಚಿಸುವಂತೆ ಇತ್ತು. ಬರಿಗಾಲಿನಲ್ಲಿ ಬಿರುಸಿನ ನಡಿಗೆಯನ್ನು ಪ್ರಾರಂಭಿಸಿದ ಕೃಷ್ಣಣ್ಣನ ಹಿಂದೆ ನಾವುಗಳು ಸಾಲಾಗಿ ಅವರನ್ನು ಹಿಂಬಾಲಿಸಿದೆವು. ಘಾಟಿ ರಸ್ತೆಯಂತೆ ತಿರುವುಗಳನ್ನು ಹೊಂದಿದ ಕಿರಿದಾದ ಮಾರ್ಗದಲ್ಲಿ ಸಾಗುವಾಗ ನಮಗೆ ಗುಡ್ಡದಿಂದ ಬರುವ ಹಳ್ಳ ಮತ್ತು ತೊರೆಗಳು ಸಿಕ್ಕವು. ಗುಡ್ಡ ಏರುವಾಗ ಒಂದು ಕಡೆ ಕಾಫಿ ತೋಟ ಮತ್ತು ಇನ್ನೊಂದು ಕಡೆ ಕಾಡಿನ ಪರಿಸರದ ಅನುಭವವನ್ನು ಆನಂದಿಸಬಹುದು.

ಚಿಕ್ಕಮಗಳೂರು ಜಿಲ್ಲೆ ಕೇವಲ ಅರಣ್ಯ, ಜಲಪಾತ ಮತ್ತು ಗಿರಿಧಾಮಗಳಲ್ಲದೆ ತನ್ನ ಖನಿಜ ಸಂಪತ್ತಿಗೂ ಸಹಾ ಪ್ರಸಿದ್ದಿ ಪಡೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೇರುತಿ ಪರ್ವತ ಪರಿಸರದಲ್ಲಿಯೂ ಸಹ ಕಬ್ಬಿಣದ ಅದಿರು ನಿಕ್ಷೇಪಗಳ ಸಂಪತ್ತನ್ನು ಕಣ್ಣಾರೆ ಕಾಣಬಹುದು. ಬಹಳ ಹಿಂದೆ (೨೦ ನೇ ಶತಮಾನದಲ್ಲಿ) ಈ ಪರಿಸರದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಇಲ್ಲಿಯ ಅದಿರನ್ನು ಭದ್ರಾವತಿಯ ಕಬ್ಬಿಣ ಕಾರ್ಖಾನೆಗೆ ಪೂರೈಸಲಾಗುತ್ತಿತ್ತು. ಆದರೆ ಸ್ಥಳೀಯರ ವಿರೋಧದ ನಂತರ ನಡೆದ ಕಾನೂನು ಸಮರದ ತರುವಾಯ ಈ ಸೂಕ್ಷ್ಮ ಸ್ಥಳದಲ್ಲಿ ಗಣಿಗಾರಿಕೆ ಸ್ಥಗಿತ ಗೊಂಡಿತು. ಗುಡ್ಡ ಏರುತ್ತಿರುವಾಗ ಅಕ್ಕಪಕ್ಕದ ಪ್ರದೇಶಗಳ ಪಕ್ಷಿ ನೋಟ ರೋಮಾಂಚನ ಗೊಳಿಸುತ್ತದೆ. ನಾರಾಯಣನ ಕಟ್ಟೆ ಎಂದೇ ಕರೆಯಲ್ಪಡುವ ಕಲ್ಲಿನ ಕಟ್ಟೆ ತಲುಪಿದ ಮೇಲೆ ನೆಲ್ಲಿ ಕೊಟ್ಟದ್ವಾರೆ ಮತ್ತು ಕೋಟ್ಟನ್ ಕಲ್ಲವಾರೆ ಗುಡ್ಡಗಳ ನೋಟ ನಮಗೆ ಒಂದು ಹೊಸ ಉಲ್ಲಾಸ ನೀಡುವ ಮೂಲಕ ನಮ್ಮ ದಣಿವನ್ನು ನಿಂಗಿಸುತ್ತದೆ. ಇಲ್ಲಿಂದ ಮುಂದೆ ಸ್ವಲ್ಪ ದೂರ ಸಾಗಿದ ನಂತರ ಒಂದು ಪ್ರಮುಖ ಘಟ್ಟ ಸಿಗುತ್ತದೆ ಇಲ್ಲಿ ಎಡಕ್ಕೆ ಹೋದರೆ ಆನೆ ಗುಡ್ಡ, ನೇರ ಹೋದರೆ ಕುರ್ನೆ ಗುಡ್ಡ ಮತ್ತು ಬಲಕ್ಕೆ ಹೋದರೆ ನೆಲ್ಲಿ ಕೊಟ್ಟದ್ವಾರೆ, ಕೋಟ್ಟನ್ ಕಲ್ಲವಾರೆ ಮತ್ತು ಮೇರುತಿ ಪರ್ವತ ಸಿಗುತ್ತದೆ.

ನಾವು ಬಲಕ್ಕೆ ತಿರುಗಿ ಮುಂದೆ ಸಾಗಿದಂತೆ ಬದನೆಕಾನ್ ಎಸ್ಟೇಟ್ ಕಾಫಿ ಪರಿಸರ ಮತ್ತು ಕಾನನದ ಮಧ್ಯೆ ಜುಗಲ್ ಬಂದಿ ಎಂಬಂತೆ ಕಾಣ ತೊಡಗುತ್ತದೆ. ಈ ಪರಿಸರದಲ್ಲಿ ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡು ಹಂದಿಗಳು ಇದ್ದು ಸಾಕಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಇಲ್ಲಿಂದ ಮುಂದೆ ಸಾಗಿದ ನಂತರ ವಾತಾವರಣದಲ್ಲಿ ದಿಢೀರನೆ ಬದಲಾವಣೆ ಕಾಣಿಸಿಕೊಂಡು ಮುಂದೆ ಶೋಲಾ ಹುಲ್ಲುಗಾವಲು ಪ್ರದೇಶ ತೆರೆದುಕೊಳ್ಳುತ್ತದೆ. ಇನ್ನೂ ಮೇರುತಿ ಶಿಖರದ ಆರೋಹಣದ ಕೊನೆಯ ಪಥ ಬಹಳ ಸಾಹಸಕಾರಿಯಾಗಿದೆ. ಶ್ರಮದಾಯಕವಾಗಿ ಸಾಗುತ್ತಾ ಕಡಿದಾದ ಗಾಳಿ ಕಂದರ ಮೂಲಕ ಏರಿದ ನಂತರ ಎಲ್ಲಾ ನಿರೀಕ್ಷೆಗಳನ್ನು ಮೀರಿಸುವ ನೋಟ ನಮ್ಮನ್ನು ದಿಗ್ಬ್ರಾಂತ ಗೊಳಿಸುತ್ತದೆ.

ಮೇರುತಿ ಪರ್ವತದ ಶಿಖರ:- ಶಿಖರದ ಮೇಲಿಂದ ಸುತ್ತಮುತ್ತಲಿನ ವಿವಿಧ ಆಕಾರ ಮತ್ತು ಗಾತ್ರಗಳ ಬೆಟ್ಟಗಳ ದೃಶ್ಯ ಒಂದು ಕ್ಷಣ ಮೈಯಲ್ಲಿ ಕಂಪನದ ಅನುಭವ ಸೃಷ್ಟಿಸುತ್ತದೆ. ಎದುರುವಾರೆ ಗುಡ್ಡ, ಆನೆಗುಡ್ಡ, ಕೂರ್ನೆ ಗುಡ್ಡ, ನೆಲ್ಲಿ ಕೊಟ್ಟದ್ವಾರೆ ಗುಡ್ಡ, ಕೋಟ್ಟನ್ ಕಲ್ಲವಾರೆ ಗುಡ್ಡ, ಕುದುರೆಮುಖ ಗಿರಿ, ಆಡಿನಕೆರೆ ಗುಡ್ಡ, ಬಲ್ಲಾಳರಾಯನ ದುರ್ಗ, ಕರ್ಪೂರದ ಗುಡ್ಡ, ಕಳಸ, ಹೊರನಾಡು, ಬಸರಿಕಟ್ಟೆ ಮತ್ತು ಭದ್ರಾ ನದಿಯ ನೋಟದ ಜೊತೆಗೆ ದೂರ ದೂರದವರೆಗೂ ಕಾಣುವ ಆಕಾಶವನ್ನು ಚುಂಬಿಸುವ ಗಿರಿಗಳ ಸಾಲು ನೋಡಿದಾಗ ಮನಸ್ಸಿಗೆ ಬರುವ ಸಾಲೇ – ಸ್ವರ್ಗಕ್ಕೆ ಮೂರೇ ಗೇಣು. ಮೇರುತಿ ಪರ್ವತದ ಶಿಖರದ ಮೇಲೆ ಗಣಪತಿಯನ್ನು 1909ರಲ್ಲೇ ಪ್ರತಿಷ್ಟಾಪಿಸಲಾಗಿದ್ದು ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಇದಕ್ಕೆ ದೊಡ್ಡ ಪೂಜೆ ನಡೆಯುತ್ತದೆ. ಕೆಲವು ದಶಕಗಳ ಹಿಂದೆ ಮೇರುತಿ ಶಿಖರದಲ್ಲಿ ರಾತ್ರೋರಾತ್ರಿ ಶಿಲುಬೆಯನ್ನು ನೆಟ್ಟ ಕಾರಣಕ್ಕಾಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಲುಬೆಯನ್ನು ತೆರವು ಗೊಳಿಸಿ ಮೇರುತಿ ಪರ್ವತದ ಪರಿಸರವನ್ನು ಸಂರಕ್ಷಿಸಲಾಯಿತು.

ಅವರೋಹಣ:- ಲಲಿತಾದ್ರಿ ಇಂದ ಶಿಖರ ಏರಿ ಬಸರಿಕಟ್ಟೆಯ ಕಡೆಗೆ ಇಳಿಯಬಹುದು ಅಥವಾ ಬಂದ ದಾರಿಯಲ್ಲೇ ವಾಪಸ್ಸು ಹೋಗಬಹುದು. ಲಲಿತಾದ್ರಿ ಕಡೆಯಿಂದ ಮೇರುತಿ ಪರ್ವತದ ಶಿಖರಕ್ಕೆ ಹೋಗಿಬರಲು 18 ಕಿಲೋಮೀಟರ್ ಆಗುತ್ತದೆ. ಹೆಚ್ಚು ಪ್ರಚಲಿತ ಇಲ್ಲದ ರಾಜ್ಯದ ಏಳನೇಯ ಎತ್ತರದ ಗುಡ್ಡಕ್ಕೆ ಮಳೆಗಾಲದ ನಂತರದ ದಿನಗಳು ಸೂಕ್ತ ಏಕೆಂದರೆ ಮಳೆಗಾಲದಲ್ಲಿ ರಭಸದಿಂದ ಹರಿಯುವ ತೊರೆಗಳು ಮತ್ತು ಹಳ್ಳಗಳು ಅಪಾಯವನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಹೋಗುವಾಗ ಆದಷ್ಟು ಬೆಳಗ್ಗಿನ ಜಾವ ಹೋಗುವುದು ಉತ್ತಮ. ಈ ಪ್ರದೇಶದಲ್ಲಿ ಕಾಟಿಗಳ ಗುಂಪಿನ ಹಾವಳಿ ಜಾಸ್ತಿ ಇದ್ದು ಚಾರಣಕ್ಕೆ ಸ್ಥಳೀಯರನ್ನು ಕರೆದುಕೊಂಡು ಹೋಗುವುದು ಸುರಕ್ಷತ ದೃಷ್ಟಿಯಿಂದ ಬಹಳ ಸೂಕ್ತ. ಏನೇ ಹೇಳಿ ಶಂಖದ ಆಕಾರದ ಮೇರುತಿ ಪರ್ವತದ ಪರಿಸರ ಶಂಖದ ನಾದದಂತೆ ಧನಾತ್ಮಕವಾದ ಮಾನಸಿಕ ಶಕ್ತಿ ಮತ್ತು ಚಿಂತನೆಗಳನ್ನು ಬಲಪಡಿಸುತ್ತದೆ. ಇಲ್ಲಿಗೆ ಬರುವ ಎಲ್ಲಾ ಚಾರಣಿಗರಲ್ಲಿ ಒಂದು ನಿವೇದನೆ – ಈ ಪರಿಸರ ಬಹಳ ಸೂಕ್ಷ್ಮ ವಾಗಿದ್ದು ಇಲ್ಲಿ ಚಾರಣಿಗರು ಕೇವಲ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಇಲ್ಲಿ ಕಳೆದ ಅದ್ಭುತ ಕ್ಷಣವನ್ನು ತಮ್ಮ ಜೊತೆಗೆ ಕೊಂಡೊಯ್ಯ ಬೇಕು.

ಬರಹ: ಅಜಯ್ ಕುಮಾರ್ ಶರ್ಮಾ, ಶಿವಮೊಗ್ಗ.
( ಪರಿಸರಾಸಕ್ತರು, ಇತಿಹಾಸ ತಜ್ಞರು ಹಾಗೂ ಹವ್ಯಾಸಿ ಬರಹಗಾರರು)