
ನಾಲ್ಕುನೂರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುಷ್ಕರಣಿ `ಚಂಪಕ ಸರಸ್ಸು’ (Champaka Sarasu) ಆರೇ ತಿಂಗಳಲ್ಲಿ ಯಶೋಮಾರ್ಗದ ಮೂಲಕ ಪುನಶ್ಚೇತನಗೊಂಡು ಲೋಕಾರ್ಪಣೆಗೊಂಡಿದೆ. ಖ್ಯಾತ ಪರಿಸರ ಹಾಗೂ ಜಲತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಷ್ಕರಣಿಯನ್ನ ಗ್ರಾಮದ ಸುಪರ್ದಿಗೆ ನೀಡಲಾಗಿದೆ. ಈ ಪುಷ್ಕರಣಿಯ ಹಿಂದಿನ ಇತಿಹಾಸ ಹಾಗೂ ಪ್ರೇಮ ಕಥೆಯನ್ನ ಕೇಳಿದ್ದ ಯಶ್ (Actor Yash) ತನ್ನ ಯಶೋಮಾರ್ಗದ (Yashomarga) ಮೂಲಕ ಮಲೆನಾಡಿನ ಮೂಲೆಗೂ ತಮ್ಮ ಸಾಮಾಜಿಕ ಕಾರ್ಯ ವಿಸ್ತರಿಸಿದ್ದು ಕೂಡ ಕುತೂಹಲಕಾರಿ ವಿಷಯ.

ಮಹಾಂತಿನ ಮಠ ಅಥವಾ ಚಂಪಕ ಸರಸ್ಸು ಎಂದು ಕರೆಯುವ ಕೆಳದಿ ಅರಸರ ಕಾಲದ ಈ ಪುಷ್ಕರಣಿಗೆ ಐತಿಹಾಸಿಕವಾಗಿ ನಾನಾ ನಿರೂಪಣೆಗಳಿವೆ. ಚಂಪಕ ಸರಸ್ಸು ಎಂದರೆ ಸಂಪಿಗೆ ವನದ ಮಧ್ಯೆ ಇರುವ ಕಲ್ಯಾಣಿ ಅಥವಾ ಪುಷ್ಕರಣಿ ಎಂದರ್ಥ. ಹಲವು ಇತಿಹಾಸಜ್ಞರು ಕೆಳದಿ ಅರಸ ರಾಜ ವೆಂಕಟಪ್ಪ ನಾಯಕನಿಗೆ ಬೆಸ್ತರ ಯುವತಿ ಚಂಪಕಾಳ ಮೇಲೆ ಮೋಹವಿತ್ತು. ಆಕೆಯ ಸ್ನೇಹವನ್ನ ಸಹಿಸದ ರಾಣಿ ಹಾಗೂ ರಾಜ್ಯದ ಜನ ಚಂಪಕಾಳನ್ನ ಅವಮಾನಿಸುತ್ತಿದ್ದರು. ಈ ಕಾರಣದಿಂದ ಆಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ನೆನೆಪಿಗಾಗಿ ವೆಂಕಟಪ್ಪ ಪುಷ್ಕರಣಿ ಕಟ್ಟಿಸಿದ್ದು ಎಂದು ಕೆಲವು ಇತಿಹಾಸಜ್ಞರಯ ಉಲ್ಲೇಖಿಸಿದ್ದಾರೆ. ಈಗಲೂ ಶಿವಮೊಗ್ಗದಲ್ಲಿ ಸಾವಿರಾರು ಕೆರೆಗಳಿವೆ ಅವೆಲ್ಲವೂ ಸಹ ೧೪೯೯-೧೫೬೫ ರ ಮಧ್ಯೆ ಕೆಳದಿ ಅರಸರು ಕಟ್ಟಿಸಿದ್ದು ವಿಶೇಷ.

ಚಂಪಕ ಸರಸ್ಸು ಕೊಳ ಶಿವಮೊಗ್ಗದ ಸಾಗರ ತಾಲೂಕು ಆನಂದಪುರ ಹೋಬಳಿಯ ಮಲಂದೂರು ಗ್ರಾಮದಲ್ಲಿದೆ. ೭೬.೮ ಮೀಟರ್ ಅಗಲ ಹಾಗೂ ೭೭.೮ ಮೀಟರ್ ಉದ್ದವಿದೆ. ಅಂದು ಸ್ಥಳೀಯವಾಗಿ ಸಿಗುತ್ತಿದ್ದ ಜಂಬಿಟ್ಟಗಿ ಕಲ್ಲುಗಳನ್ನೇ ಕಟ್ಟಿ ಈ ಕೊಳವನ್ನ ನಿರ್ಮಿಸಲಾಗಿತ್ತು. ಆ ಕಲ್ಲುಗಳು ಇಂದಿಗೂ ನಾಶವಾಗದೇ ಉಳಿದುಕೊಂಡಿದ್ದವು ಆದರೆ ಕೊಳ ಮಾತ್ರ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಯಶೋಮಾರ್ಗದ ರೂವಾರಿಗಳಾದ ಶಿವಾನಂದ ಕಳವೆ ನಟ ಯಶ್‌ಗೆ ಈ ಕೊಳದ ಮಾಹಿತಿ ನೀಡಿ ಪುನಶ್ಚೇತನ ಮಾಡುವ ಸಂಕಲ್ಪ ಮಾಡಿದರು. ಆರು ತಿಂಗಳಲ್ಲಿ ಅವರ ಸಂಕಲ್ಪ ಕೈಗೂಡಿದೆ.

ಈ ಕುರಿತು ಮಾತನಾಡಿದ ಪರಿಸರ ಹಾಗೂ ಜನ ತಜ್ಞ ಶಿವಾನಾಂದ ಕಳವೆ ಮಾತನಾಡಿ, ಕರ್ನಾಟಕದ ಕೆರೆಗಳ ಪುನಶ್ಚೇತನದ ಬಗ್ಗೆ ನಾವು ಯಶ್ ಅವರ ಬಳಿ ಮಾತನಾಡುತ್ತಿದ್ದೆವು. ಕೆರೆಗಳ ಹೂಳು ತೆಗೆಯೋಣ ಎಂದು ಅವರು ಹೇಳಿ ನಮಗೆ ನೋಡಿಕೊಂಡು ಬರಲು ಪ್ರವಾಸ ಕಳಿಸಿದರು. ಯಶೋಮಾರ್ಗದಡಿ ಬೀದರ್‌ನಿಂದ ಚಾಮರಾಜ ನಗರದ ವರೆಗೆ ಸಾವಿರಾರು ಕೆರೆಗಳನ್ನ ನೋಡ್ತಾ ಹೋದೆ. ಕರ್ನಾಟಕದಲ್ಲಿ ಮೂವತ್ತೊಬತ್ತು ಸಾವಿರ ಕೆರೆಗಳಿವೆ. ನಾನು ಸಾಗರಕ್ಕೆ ಬಂದಾಗ ಚಂಪಕ ಸರಸ್ಸು ನೋಡುವ ಅವಕಾಶ ಬಂತು. ಇದು ಗಿಡ-ಗಂಟಿಗಳಿಂದ ಕೂಡಿತ್ತು. ಇಲ್ಲಿ ಓಡಾಡಿದ್ದಾಗ ಮದ್ಯದ ಬಾಟೆಲ್‌ಗಳು ಹಾಗೂ ಬೇಡವಾದ ವಸ್ತುಗಳು ಬಿದ್ದಿದ್ದವು. ಇದನ್ನ ನೋಡಿದಾಗ ನನಗೆ ಬೇಸರ ಅನಿಸಿತು. ಯಶೋಮಾರ್ಗದ ಮೂಲಕ ಈ ಐತಿಹಾಸಿಕ ಪುಷ್ಕರಣಿ ಪುನಶ್ಚೇತನ ಮಾಡುವ ಸಂಕಲ್ಪ ಮಾಡಿದೆವು.

ಕಳೆದ ನವೆಂಬರ್‌ನಲ್ಲಿ ಕೆಲಸ ಶುರುವಾಯ್ತು. ಮೊದಲ ಹಂತದಲ್ಲಿ ಇದನ್ನ ಶುಚಿಮಾಡಲು ಮುಂದಾದೆವು. ಇದರ ಸುತ್ತಲ ಕಟ್ಟೆಗಳನ್ನ ಸೀಳಿಕೊಂಡು ಬೃಹದಾಕಾರದ ಮರಗಳು ಬೆಸೆದುಕೊಂಡಿದ್ದವು. ಆ ಕಾಲದಲ್ಲಿ ಕಲ್ಲುಗಳನ್ನ ಮಣ್ಣಿನಿಂದ ಕಟ್ಟಲಾಗಿತ್ತು. ನಾವು ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ತರುವಂತಿರಲಿಲ್ಲ. ಹಾಗಾಗಿ ಒಂದೊಂದು ಕಲ್ಲು ಎಂಭತ್ತು ಕೆಜಿ ತೂಗುತ್ತಿದ್ದವು. ಇಲ್ಲಿನ ಸ್ಥಳೀಯ ಕೆಲಸಗಾರರನ್ನ ಮೂವತ್ತು ನಲವತ್ತು ಜನರನ್ನ ತೆಗೆದುಕೊಂಡು ಯಶೋಮಾರ್ಗ ತಂಡ ಇಲ್ಲಿ ನಿಲ್ತು. ಮೂರ್ನಾಲ್ಕು ತಿಂಗಳು ಈ ಸ್ವಚ್ಛತಾ ಕಾರ್ಯ ಇಲ್ಲಿ ನಡೆಯಿತು. ಕೊಳದ ಪುನಶ್ಚೇತನದ ಜೊತೆ ದಿಬ್ಬದ ಮೇಲಿನ ದೇವಸ್ಥಾನಗಳೂ ಸಹ ಹುರುಪು ಪಡೆದುಕೊಂಡಿವೆ. ಈ ಕೊಳ ಹೇಗಿತ್ತೋ ಅದೇ ಸ್ವರೂಪದಲ್ಲಿಯೇ ಉಳಿಸಿಕೊಂಡಿದ್ದೇವೆ. ಕೆಳದಿ ಅರಸರು ಸಾವಿರು ಕೆರೆ ಕಟ್ಟೆಗಳನ್ನ ಕಟ್ಟಿಸಿದ್ದಾರೆ. ಅವರ ನೆನಪಿನ ಈ ಕೊಳವೂ ಪುನಶ್ಚೇತನಗೊಳ್ಳಬೇಕಿತ್ತು. ಯಶ್ ವಿಶ್ವವ್ಯಾಪಿ ಚಿರಪರಿಚಿತವಾಗಿದ್ದಾರೆ. ಇಂದು ಕೆರೆಗಳ ಪುನಶ್ಚೇತನದ ಮೂಲಕ ಮಹಾನ್‌ಕಾರ್ಯ ಮಾಡುತ್ತಿದ್ದಾರೆ ಎನ್ನುತ್ತಾರೆ.
