ಮಲೆನಾಡಿನಲ್ಲಿ ಬುಡಕಟ್ಟು ಹಿನ್ನೆಲೆ ಇರುವ ಸಮುದಾಯಗಳಲ್ಲಿ ಅದರಲ್ಲೂ ಈಡಿಗ ಮತ್ತು ಒಕ್ಕಲಿಗರು ಶಿಕಾರಿ, ಮೀನು ಬೇಟೆಯನ್ನ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿದ್ದಾರೆ. ಅರಣ್ಯ ಕಾನೂನುಗಳು ಬಿಗಿಯಾದ ಮೇಲೆ ಶಿಕಾರಿ ಜನಮಾನಸದಿಂದ ಮರೆಯಾಯ್ತು. ಆದರೆ ವರ್ಷವಿಡೀ ಮೀನು ಹಿಡಿಯುವ ಶೈಲಿಗಳು ಇಂದಿಗೂ ಬೇರೆ ಬೇರೆ ಹೆಸರಲ್ಲಿ ಉಳಿದುಕೊಂಡು ಬಂದಿವೆ.

ಮುಂಗಾರು ಆರಂಭವಾಗುತ್ತಿದ್ದಂತೆ ಹಳ್ಳ-ಕೊಳ್ಳಗಳಿಂದ ನೀರಿನ ಸೆಳೆವಿನಲ್ಲಿ ಹತ್ತಿ ಬರುವ ಮೀನುಗಳನ್ನ ಹಿಡಿಯಲು ರಾತ್ರಿ ಬ್ಯಾಟರಿ ಇಟ್ಟುಕೊಂಡು ತೆರಳುತ್ತಾರೆ ಅವುಗಳಿಗೆ ಹತ್ತು ಮೀನು ಹೊಡೆಯೋದು ಎಂಬ ಪದ ಪ್ರಯೋಗವಿದೆ. ನೀರು ಇಳಿಯುತ್ತಿದ್ದಂತೆ ಪುನಃ ಬೇಟೆ ಅದಕ್ಕೆ ಇಳಿ ಮೀನು ಎನ್ನಲಾಗುತ್ತೆ. ಈ ಮಧ್ಯೆ ಹೊಳೆಗಳಿಗೆ ಹಾಸು ಹಾಕುವ ಸಂಪ್ರದಾಯವಿದೆ. ಬಿದಿರಿನ ಬೊಂಬುಗಳನ್ನ ಹಾಸಿ, ದೆಬ್ಬೆಗಳನ್ನ ನೀರಿಗೆ ಚಾಚಿ ಮೀನು ಹಿಡಿಯಲಾಗುತ್ತೆ. ಬೇಸಿಗೆಯಲ್ಲಿ ಮಾತ್ರ ಕೆರೆಬೇಟೆ ಮಲೆನಾಡಿನಲ್ಲಿ ಅತೀ ವಿಶಿಷ್ಟ ಆಚರಣೆಯಾಗಿದೆ.

ಮಲೆನಾಡಿನಲ್ಲಿ ಕೆರೆಗಳು ಸಹಜವಾಗಿ ಹೆಚ್ಚಿವೆ. ಜನರು ಜಲಮೂಲಗಳನ್ನ ಉಳಿಸಿಕೊಂಡು ಬಂದಿದ್ದಾರೆ. ಈ ಕೆರೆಗಳಲ್ಲಿರುವ ಮೀನುಗಳನ್ನ ಬೇಟೆಯಾಡಲು ಬೇಸಿಗೆಯಲ್ಲಿ ದಿನ ನಿಗದಿ ಮಾಡಲಾಗುತ್ತೆ. ಕೆರೆ ವಿಸ್ತೀರ್ಣದಲ್ಲಿ ಹೆಚ್ಚಿದ್ದರೆ ಆ ಕೆರೆಗಳಿಗೆ ಅಕ್ಕಪಕ್ಕದ ಊರಿನವರೂ ಸಹ ಮೀನು ಹಿಡಿಯಲು ಬರುತ್ತಾರೆ. ಮೀನು ಹಿಡಿಯಲೆಂದೇ ಮಲೆನಾಡಿನಲ್ಲಿ ಕೂಣಿ, ಮಂಕ್ರಿ ಎಂಬೆಲ್ಲಾ ಸಾಧನಗಳಿವೆ. ಕೆರೆಬೇಟೆ ಶುರುವಾಗೋದಕ್ಕೂ ಮುಂಚೆ ದಡದಲ್ಲಿ ಬೇಟೆಗಾರರು ಪರಿಕರಗಳನ್ನ ಹಿಡಿದು ಹಾಜರಿರುತ್ತಾರೆ.

ಎಲ್ಲರಿಗೂ ಗ್ರಾಮ ಪಂಚಾಯಿತಿಯಿಂದ ಶುಲ್ಕ ನಿಗದಿ ಮಾಡಲಾಗುತ್ತೆ. ಒಮ್ಮೆಲೇ ಎಲ್ಲರನ್ನೂ ಕೆರೆಯಂಗಳಕ್ಕೆ ಬಿಡಲಾಗುತ್ತೆ. ಅವರೆಲ್ಲಾ ಪರಿಕರಗಳನ್ನ ಹಿಡಿದು ಕೆರೆಗೆ ಇಳಿದರೆ ಮೀನುಗಳನ್ನ ಹಿಡಿಯೋದು ನೋಡುವುದೇ ಚೆಂದ. ದೊಡ್ಡ ಮೀನುಗಳು ಕೂಣಿಯೆಂಬ ಸಾಧನದಲ್ಲಿ ಸಿಲುಕುತ್ತವೆ. ಸಣ್ಣಪುಟ್ಟ ಮೀನುಗಳನ್ನ ಮಂಕ್ರಿ ಅಥವಾ ಸಣ್ಣ ಬಲೆಯಲ್ಲಿ ಗೋರಲಾಗುತ್ತೆ.

ಹೀಗೊಂದು ಕೆರೆಬೇಟೆ ರಾಮನವಮಿ ದಿನದಂದೇ ಸಾಗರದ ಚನ್ನಶೆಟ್ಟಿಕೊಪ್ಪದಲ್ಲಿ ಜರುಗಿದೆ. ಇಲ್ಲಿನ ಸುಪ್ರಸಿದ್ಧ ಕೆರೆ ಚನ್ನಮ್ಮಾಜಿ ಕೆರೆ. ಸಾವಿರಕ್ಕೂ ಅಧಿಕ ಜನರು ಈ ಕೆರೆಬೇಟೆಯಲ್ಲಿ ಮಿಂದೆದ್ದರು. ಏಕಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆಯಾಡಿದರು. ಒಂದು ಕೂಣಿಗೆ 700 ರೂಪಾಯಿ ದರ ನಿಗದಿಪಡಿಸಿದ್ದ ಗ್ರಾಮಸ್ಥರು ಮಲೆನಾಡಿನ ಜನರ ಸಂಸ್ಕೃತಿಯನ್ನ ಅನಾವರಣ ಮಾಡಿದರು. ಬೇಸಿಗೆ ಬಂದು ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ
ಆರಂಭಗೊಳ್ಳುವ ಈ ಕೆರೆಬೇಟೆ ಈ ಗ್ರಾಮದಲ್ಲಿ ಎರಡು ವರ್ಷಗಳ ನಂತರ ನಡೆದಿದೆ. ಮೀನು ಹಿಡಿಯಲು ಇಷ್ಟು ಜನ ಬಂದಿದ್ದರೆ ಕೆರೆಬೇಟೆ ನೋಡಲು 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಬಹಳ ಮುಖ್ಯವಾಗಿ ಈ ಕೆರೆಬೇಟೆಯಿಂದ ಚನ್ನಶೆಟ್ಟಿಕೊಪ್ಪ ಗ್ರಾಮಕ್ಕೆ 14ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ.
