ಕುದುರೆಮುಖ ವನ್ಯಜೀವಿ ವಿಭಾಗ, ಕೊಲ್ಲೂರು ವನ್ಯಜೀವಿ ವಲಯದ ಪರಿಮಿತಿಗೆ ಬರುವ ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಕೊಡಚಾದ್ರಿ ಜೀಪ್ ರೈಡ್‌ಗೆ ಸಂಬಂಧಿಸಿದಂತೆ ಇಲಾಖೆ ಕೆಲವು ನಿಬಂಧನೆಗಳನ್ನ ನೀಡಿದೆ. ಪರಿಸರ ಸಂರಕ್ಷಣೆ, ಪ್ರವಾಸಿಗರ ಜೀವ ಭದ್ರತೆ ಜೊತೆ ಜೀಪ್ ಮಾಲೀಕರು ಹಾಗೂ ಚಾಲಕರ ಮೇಲೆ ದೂರುಗಳೂ ಕೇಳಿ ಬಂದಿದ್ದರಿಂದ ಡಿಸಿಎಫ್ ಗಣಪತಿ.ಕೆ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಆದೇಶಿಸಿದ್ದಾರೆ.
ಕೊಡಚಾದ್ರಿ ಚಾರಣಯೋಗ್ಯ ಪ್ರವಾಸಿ ತಾಣ ಹಾಗೂ ನೆತ್ತಿಯ ಮೇಲಿನ ಸರ್ವಜ್ಞ ಪೀಠದ ನೆಪದಲ್ಲಿ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಪ್ರತಿದಿನ ಆಗಮಿಸುತ್ತಾರೆ. ಸುಮಾರು ನೂರೈವತ್ತಕ್ಕೂ ಹೆಚ್ಚು ಜೀಪ್‌ಗಳು, ತಲಾ ಎರಡು ಸಾವಿರ ರೂಪಾಯಿಯಂತೆ ಪಡೆದು ಕೊಡಚಾದ್ರಿ ಪ್ರವಾಸ ಮಾಡಿಸುತ್ತಾರೆ. ಆದರೆ ಸುಮಾರು ೨ ಕಿಲೋಮೀಟರ್ ಏರುವ ಹಾದಿ ದುರ್ಗಮವಾಗಿದೆ. ಸರ್ಕಸ್ ಮಾಡುತ್ತಾ ಶಬ್ದದೊಂದಿಗೆ ಸುತ್ತಲ ಪರಿಸರಕ್ಕೂ ಹಾನಿಯಾಗುತ್ತೆ ಎಂಬ ಕಾರಣಕ್ಕೆ ಪರಿಸರಾಸಕ್ತರೂ ಸಹ ಜೀಪ್ ಗಳಿಗೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದ್ದರು. ಅದರಲ್ಲಿ ಭದ್ರಾವತಿ ಮೂಲದ ಯುವಕ ಶರತ್, ಕೊಡಚಾದ್ರಿ ಅಂಚಿನ ಅರಿಸಿನಗುಂಡಿ ಜಲಪಾತದಲ್ಲಿ ಕಾಲುಜಾರಿ ಬಿದ್ದು ಮೃತನಾದ ಬಳಿಕ ಈ ಭಾಗದಲ್ಲಿ ಹದಿನೈದು ದಿನಗಳ ಕಾಲ ಪ್ರವಾಸ ನಿರ್ಬಂಧಿಸಲಾಗಿತ್ತು. ಆದರೆ ಧಾರ್ಮಿಕ ಸ್ಥಳದ ಸೋಗಿನಲ್ಲಿ ನಡೆಯುವ ಚಾರಣಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಅಡೆತಡೆಗಳೂ ಇರೋದ್ರಿಂದ ವನ್ಯಜೀವಿ ವಿಭಾಗ ಪ್ರವಾಸ ಪುನಾರಂಭ ಮಾಡಿದೆ ಆದರೆ ಕೆಲ ನಿಬಂಧನೆಗಳನ್ನ ಜೀಪ್ ಮಾಲೀಕರು ಪಾಲಿಸಬೇಕಿದೆ. ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿ ನೀಡಬೇಕಿದೆ.

ಹಾಗಿದ್ದರೆ ಮುಚ್ಚಳಿಕೆ ಪತ್ರದಲ್ಲೇನಿದೆ..?
ಈ ನೋಂದಣಿ ವಾಹನದ ಮಾಲೀಕನಾದ ನಾನು, ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ, ನನ್ನ ಸ್ವ ಇಚ್ಛೆಯಿಂದ ಭಕ್ತರು ಅಥವಾ ಪ್ರವಾಸಿಗರಿಗೆ ವಾಹನದಲ್ಲಿ ಕಟ್ಟಿನಹೊಳೆ ಮೂಲಕ ಕರೆದುಕೊಂಡು ಹೋಗುತ್ತಿದ್ದು, ರಸ್ತೆ ಹದಗೆಟ್ಟಿರೋದು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಇರುವುದು ನಿಜ..! ನಮ್ಮ ವಾಹನದಲ್ಲಿ ತೆರಳುವವರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ನಾವೇ ಹೊಣೆ. ಕೊಡಚಾದ್ರಿ ಪ್ರವೇಶಕ್ಕೆ ನಿಗದಿ ಪಡಿಸಿದ ಸಮಯದ ಮಾಹಿತಿ ನಮಗೆ ಇದೆ. ಹಾಗೂ ಸಮಯ ಮೀರಿದ ಮೇಲೆ ಇಲ್ಲಿನ ಅಧಿಕಾರಿಗಳಿಗೆ ಒತ್ತಡ ಹೇರುವುದಿಲ್ಲ. ಗೇಟ್ ಬಳಿ ಸರತಿಯಂತೆ ನಿಂತು ಸಹಕರಿಸುತ್ತೇನೆ. ಒಂದು ವೇಳೆ ತಪ್ಪಿದರೆ ದಂಡ ನೀಡಲು ಬದ್ಧನಾಗಿರುತ್ತೇನೆ. ವಾಹನಕ್ಕೆ ಧ್ವನಿವರ್ಧಕ ಹಾಕುವುದಿಲ್ಲ. ಮದ್ಯಪಾನ ಮಾಡುವುದಿಲ್ಲ. ಪ್ರವಾಸಿಗರಿಗೂ ಕೂಡ ಮಾದಕವಸ್ತು ಹಾಗೂ ಮದ್ಯದ ಬಗ್ಗೆ ಮಾಹಿತಿ ನೀಡುತ್ತೇನೆ. ಪ್ಲಾಸ್ಟಿಕ್ ಬಳಕೆ ಬಗ್ಗೆ ಅರಿವು ಮೂಡಿಸುತ್ತೇನೆ. ಪ್ರವಾಸಿಗರು ಗೇಟ್ ಬಳಿ ಬಂದು ಅನಗತ್ಯ ತಕರಾರು ಮಾಡುವುದಕ್ಕೆ ಆಸ್ಪದ ನೀಡೋದಿಲ್ಲ. ಅರಣ್ಯ ಇಲಾಖೆ ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನ ಪಾಲಿಸುತ್ತೇನೆ.
ಹೀಗೆ ಒಕ್ಕಣೆ ಇರುವ ಪತ್ರದ ಮೇಲೆ ಜೀಪ್ ಮಾಲೀಕ ಅಥವಾ ಚಾಲಕ ರುಜು ಮಾಡಬೇಕು. ಇದು ಡಿಸಿಎಫ್ ತಂದ ಹೊಸ ನಿಯಮ. ಸದ್ಯ ಐಎಫ್‌ಎಸ್ ಅಧಿಕಾರಿಯ ಆದೇಶ ಪರಿಸರಾಸಕ್ತರಿಗೆ ತೃಪ್ತಿ ತಂದಿದೆ. ಜೀಪ್ ಮಾಲೀಕರಿಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ( ೧೯೭೨) ರ ಅರಿವಿರುವುದರಿಂದ ಪಾಲನೆ ಮಾಡಲೇ ಬೇಕಿದೆ.

ಕೊಡಚಾದ್ರಿಯಲ್ಲಿ ಇದರ ಹೊರತಾಗಿಯೂ ಸಾಕಷ್ಟು ಬದಲಾವಣೆಗಳನ್ನ ತರಲಾಗಿದೆ. ವಾಟರ್‌ಬಾಟೆಲ್‌ಗಳಿಗೆ ಡೆಪಾಸಿಟ್ ಕಟ್ಟಿಸಿಕೊಳ್ಳಲಾಗುತ್ತೆ. ಜೀಪ್ ಮಾಲೀಕರಿಗೆ ಇ-ಗೇಟ್ ( E-Gate app) ತಂತ್ರಾಂಶದ ಮೂಲಕ ರಿಜಿಸ್ಟರ್ ಮಾಡಿಕೊಂಡು ಹೋಗುವ ನಿಯಮ ಕೊಡಚಾದ್ರಿ ಆರೋಹಣದ ಸ್ಥಳದಲ್ಲಿ ಇರಿಸಲಾಗಿದೆ. ಕುದುರೆಮುಖ ವೈಲ್ಡ್‌ಲೈಫ್ ವ್ಯಾಪ್ತಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವ ಈ ತಂತ್ರಾಂಶ, ಜೀಪ್‌ಗಳ ಸಮಯವನ್ನೂ ಮೇಲುಸ್ತುವಾರಿ ಮಾಡುತ್ತೆ. ನಿಗದಿತ ಸಮಯಕ್ಕೂ ಹೆಚ್ಚು ಕಾಲಹರಣವಾದರೆ ನಿಯಮ ಉಲ್ಲಂಘನೆ ದಂಡವಿದೆ.
ರೀಲ್ಸ್, ಶಾರ್ಟ್ ವಿಡಿಯೋಗಳ ಹವ್ಯಾಸದಲ್ಲಿ ಜೀಪ್ ಸಾಹಸ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಪ್ರಚಾರ ಪಡೆದುಕೊಂಡಿದ್ದು, ಜೀಪ್ ಮಾಲೀಕರೆ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ಹೊಗೆಯುಗುಳುವ ಜೀಪ್‌ಗಳು ಕರ್ಕಶ ಶಬ್ಧ ಮಾಡುತ್ತಾ ಟೈರ್‌ಗಳನ್ನ ರೋಲ್ ಮಾಡುತ್ತಿರುವುದು ಈ ಹೊತ್ತಿಗೂ ಕೂಡ ವನ್ಯಜೀವಿ ಕಾನೂನಿಡಿ ಅಪರಾಧ. ಇದನ್ನ ಮೊದಲ ಅರಿತುಕೊಂಡು ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಅನುವುಮಾಡಿಕೊಡಬೇಕಿದೆ.