ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರಿವಂತೆಯಲ್ಲಿ ಬೃಹತ್ ಗಾತ್ರದ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ. ಅದರಲ್ಲೇನು ವಿಶೇಷ ಅಂತೀರಾ, ಈ ಬುದ್ಧ ಕಣ್ತೆರೆದು ಜಗತ್ತನ್ನ ನೋಡ್ತಾನೆ. ಇದೊಂದು ವಿಶಿಷ್ಟ ಕಲ್ಪನೆ ಹಾಗೂ ಇದರ ಹಿಂದೆ ಉತ್ತಮ ಸಂದೇಶವಿದೆ. ಇಡೀ ವಿಶ್ವದಲ್ಲಿ ಎಲ್ಲೇ ಹೋದರೆ ಸಾಮಾನ್ಯವಾಗಿ ಧ್ಯಾನದಲ್ಲಿ ಕಣ್ಮುಚ್ಚಿ ಕುಳಿತುಕೊಂಡಿರುವ ಬುದ್ಧನ ವಿಗ್ರಹಗಳೇ ಕಾಣುತ್ವೆ. ಆದರೆ ಈ ವಿಭಿನ್ನ ವಿಗ್ರಹ ಹಲವು ಕಾರಣಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಇದರ ರೂವಾರಿ ಸಿರಿವಂತೆಯ ಚಿತ್ರಸಿರಿ ಚಂದ್ರಶೇಖರ್. ಮಲೆನಾಡಿನಲ್ಲಿ ಸಾಂಕೃತಿಕ ಹಾಗೂ ಸಂಪ್ರದಾಯ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಹಾಗೂ ತಮ್ಮದೇ ಛಾಪು ಮೂಡಿಸಿದ್ದಾರೆ ಈ ಸಿರಿವಂತೆ ಚಂದ್ರಶೇಖರ್.

ಚಂದ್ರಶೇಖರ್ ಕೆಲವು ತಿಂಗಳ ಹಿಂದೆ ಈ ಕಣ್ತೆರೆವ ವಿಗ್ರಹವನ್ನ ಲೋಕಾರ್ಪಣೆ ಮಾಡಿದ್ಧಾರೆ. ಈ ವಿಗ್ರಹವು ಸಾಗರದಿಂದ ಜೋಗ ಹೋಗುವ ಮಾರ್ಗದಲ್ಲಿ ಸಿರಿವಂತೆ ಎಂಬ ಸ್ಥಳದಲ್ಲಿ ಕೇವಲ ಹತ್ತು ಕಿಲೋಮೀಟರ್ ಅಂತರದಲ್ಲಿರುವುದರಿಂದ ಪ್ರವಾಸಿಗರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಒಂದು ನಿಮಿಷಗಳ ಕಾಲ ತಂತ್ರಜ್ಞಾನದ ಸಹಕಾರದಿಂದ ಕಣ್ತೆರೆದು ದರ್ಶನ ನೀಡುವ ಬುದ್ಧನ ವಿಗ್ರಹವನ್ನ ಕಣ್ತುಂಬಿಕೊಳ್ಳುತ್ತಾರೆ. ಇದೊಂದು ಆಧ್ಯಾತ್ಮಿಕ ಸ್ಥಳವಾಗಿ ರೂಪುಗಳೊಳ್ಳುತ್ತಿದೆ ಕಾರಣ ಈ ಬುದ್ಧನ ವಿಗ್ರಹದ ಪ್ರವರ್ತಕ ಚಂದ್ರಶೇಖರ್ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಬುದ್ಧನ ಸಂದೇಶ ಹಾಗೂ ಅದನ್ನ ಅಳವಡಿಸಿಕೊಳ್ಳುವ ಬಗೆಯ ಬಗ್ಗೆ ಮಾತನಾಡುತ್ತಾರೆ. ನಮ್ಮ ಜೀವನದಲ್ಲಿ ಹತಾಶೆ, ನಿರುತ್ಸಾಹ, ಕೋಪ-ತಾಪಗಳಿಂದ ಆಗುವ ಪರಿಣಾಮಗಳನ್ನ ವಿವರಿಸುತ್ತಾರೆ. ಬಹಳ ಮುಖ್ಯವಾಗಿ ಬುದ್ಧನ ವಿಗ್ರಹ ಸ್ಥಾಪನೆಗೆ ಅವರದ್ದೇ ಆದ ಕಾರಣಗಳಿವೆ. ಬುದ್ಧನಿಗೆ ವೃಕ್ಷದ ಕೆಳಗೆ ಜ್ಞಾನೋದಯವಾಗಿ ಜ್ಞಾನಿಯಾದ ಎಂದು ನಂಬುವುದಿಲ್ಲ. ಆತನಿಗೆ ಅಂದಿನ ಸಮಾಜದಲ್ಲಿದ್ದ ಪಿಡುಗುಗಳು, ಶೋಷಣೆಗಳೇ ಪ್ರೇರಣೆ ಎನ್ನುತ್ತಾರೆ. ಹಾಗಾಗಿ ಬುದ್ಧ ಈ ಜಗತ್ತನ್ನ ಕಣ್ತೆರೆದು ನೋಡುವ ಅನಿವಾರ್ಯವೂ ಇದೆ ಎಂಬುದು ಚಂದ್ರಶೇಖರ್ ಅವರ ಇಂಗಿತ.

ಇನ್ನು ಚಂದ್ರಶೇಖರ್ ಅವರ ಮುಖ್ಯವಾದ ಸಂದೇಶ, ದೇಹ ದಾನದ ಜೊತೆ ನೇತ್ರ ದಾನ..! ಅಸಲಿಗೆ ಅವರು ಈ ವಿಗ್ರಹವನ್ನ ನಿರ್ಮಾಣ ಮಾಡಿಸಿರುವುದು ಈ ಉದ್ದೇಶದಿಂದಲೇ..!
ಈ ಬುದ್ಧನ ವಿಗ್ರಹ ಒಂದು ನಿಮಿಷಗಳ ಕಾಲ ಕಣ್ತೆರೆಯುತ್ತದೆ. ಇದರ ಹಿಂದಿನ ಉದ್ದೇಶ ಏನು ಎಂದರೆ, ನಾವು ಈ ಸಮಾಜದಿಂದ ಸಾಕಷ್ಟು ಉಪಯೋಗ ಪಡೆದುಕೊಂಡಿರುತ್ತೇವೆ. ಆದರೆ ಹಿಂತಿರುಗಿ ಏನನ್ನೂ ನೀಡದೇ ಮರೆಯಾಗುತ್ತೇವೆ. ಸಾವಿಲ್ಲದ ಮನೆ ಇಲ್ಲ. ನಾವು ಕಾಲಾಂತರದಲ್ಲೂ ಜೀವಿಸಬೇಕು ಎಂದರೆ ನಾವು ನಮ್ಮ ಕಣ್ಣು ಹಾಗೂ ದೇಹವನ್ನ ದಾನ ಮಾಡಬೇಕು. ದೇಹ ದಾನದಿಂದ ಹಲವರು ಜೀವಿಸುತ್ತಾರೆ. ಕಣ್ಣುಗಳ ದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕಾಗುತ್ತೇವೆ. ಇಲ್ಲಿ ಬುದ್ಧ ಕಣ್ಣು ತೆರೆಯುತ್ತಿರುವುದು ನಮ್ಮ ಮನರಂಜನೆಗಲ್ಲ, ನಮ್ಮ ಅಂತರಂಗದ ಕಣ್ಣನ್ನ ತೆರೆಯಲು ಎಂದು ಚಂದ್ರಶೇಖರ್ ಹೇಳುತ್ತಾರೆ.
ಶಿವಮೊಗ್ಗದಿಂದ ಸಾಗರ ಹಾಗೂ ಸಾಗರದಿಂದ ಜೋಗ ಪ್ರವಾಸ ಮಾಡುವವರು ಹೆದ್ದಾರಿ ಪಕ್ಕದಲ್ಲೇ ಇರುವ ಈ ಸ್ಥಳಕ್ಕೆ ಭೇಟಿ ನೀಡಬಹುದು..!