ಶಿವಮೊಗ್ಗ ಅಂದರೆ ಮಲೆನಾಡಿನ ಹೆಬ್ಬಾಗಿಲು.! ಆದರೆ ಶಿವಮೊಗ್ಗ ನಗರ ಪ್ರವೇಶಿಸಿದರೆ ಸಸ್ಯ ಸಂಕುಲದ ಕುರುಹುಗಳೇ ಇಲ್ಲ. ರಸ್ತೆ ಬದಿ ಅಲ್ಲಿಲ್ಲೊಂದು ಕಾಣಸಿಗುತ್ತಿದ್ದ ಗಿಡಗಳನ್ನೂ ಸಹ ವಿವೇಚನಾರಹಿತ ಸ್ಮಾರ್ಟ್ ಸಿಟಿ ಅಭಿವೃದ್ಧಿ ನಾಶಪಡಿಸಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ತಂಪೆರೆಯುವ, ಶುದ್ಧ ಗಾಳಿ ನೀಡುವ ಗಿಡ ಮರಗಳಿಲ್ಲ.!

ಮಲೆನಾಡಿಗೆ ಮಾದರಿಯಾಗಿರಬೇಕಿದ್ದ ನಗರ ಪ್ರವೇಶಿಸಿದರೆ ಹಸಿರೇ ಕಾಣದು, ಉಸಿರಾಡಲೂ ಶುದ್ಧ ಆಮ್ಲಜನಕವೂ ಸಿಗದು ಎಂಬ ಪರಿಸ್ಥಿತಿ ಇದೆ. ಆದರೆ ಶಿವಮೊಗ್ಗದ ಈ ಪರಿಸರಾಕ್ತರು ಎಲ್ಲರಂಥಲ್ಲ. ಭಾನುವಾರವೂ ಮನೆಯಲ್ಲಿ ಕೂರಲಿಲ್ಲ..!
ಶಿವಮೊಗ್ಗ ಸ್ವಾಸ್ಥ್ಯ ಕಾಪಾಡಲು ಟೊಂಕ ಕಟ್ಟಿ ನಿಂತಿರುವ ಶಿವಮೊಗ್ಗ ಸರ್ಜಿ ಫೌಂಡೇಷನ್ ಜೊತೆ ಪರಿಸರಾಸಕ್ತ ತಂಡಗಳು ಇಂದು ಒತ್ತುವರಿ, ಭೂಕಬಳಿಕೆ ಆತಂಕವಿರುವ ತುಂಗಾ ಮೇಲ್ದಂಡೆಯ ಮೇಲೆ ಹಸಿರು ಕ್ರಾಂತಿ ಮಾಡಿವೆ.
ಪರೋಪಕಾರಂ, ಪರ್ಯಾವರಣ ಟ್ರಸ್ಟ್, ಓಪನ್ ಮೈಂಡ್ ಶಾಲಾ ವಿದ್ಯಾರ್ಥಿಗಳು, ವಿನಾಯಕ ನಗರ ನಿವಾಸಿಗಳ ಸಂಘ, ‘Only one Earth, ರಾಗಿಗುಡ್ಡ ಟೀಂ ಸೇರಿಕೊಂಡು, ನೂರಾರು ಗಿಡಗಳನ್ನ ತುಂಗಾ ಮೇಲ್ದಂಡೆ ಬಲ ಭಾಗದಲ್ಲಿ ನೆಟ್ಟು ಖುಷಿ ಪಟ್ಟಿವೆ.
ಮುಂಜಾನೆ 6 ಗಂಟೆಯಿಂದ 9 ರ ತನಕ ನಡೆದ ಅವಿರತ ಶ್ರಮಾಧಾನ ನಿಜಕ್ಕೂ ಮಾದರಿಯಾಗಿತ್ತು. ಅದರಲ್ಲೂ ತುಂಗಾ ಮೇಲ್ದಂಡೆಯ ಸರ್ಕಾರಿ ಜಾಗದಲ್ಲಿ ಈಗ ಅಧಿಕೃತವಾಗಿ ಸಸ್ಯ ಸಂಕುಲ ಜಾಗ ಪಡೆದುಕೊಂಡಿದ್ದು ಹಲವರನ್ನ ಪ್ರೇರಣೆ ಹಾಗೂ ಜಾಗೃತಗೊಳಿಸಿದೆ.

ಈ ಕುರಿತು ಮಾತನಾಡಿದ ಸರ್ಜಿ ಫೌಂಡೇಷನ್ ನ ಡಾ. ಧನಂಜಯ್ ಸರ್ಜಿ, ನಮ್ಮ ಜೀವಕ್ಕೆ ಆಮ್ಲಜನಕ, ನೀರು, ಸಕ್ಕರೆ ಅಂಶ. ಮುಖ್ಯವಾಗಿ ಆಮ್ಲಜನಕ ಕೊರತೆಯಿಂದ ಏನಾಗಬಹುದು ಎಂಬುದನ್ನ ನಾವೆಲ್ಲಾ ಕೋವಿಡ್ ಸಮಯದಲ್ಲಿ ಅನುಭವಿಸಿದ್ದೇವೆ. ಆಮ್ಲಜನಕ ದೊರೆಯುವುದೇ ಗಿಡ-ಮರಗಳಿಂದ. ಒಂದು ಮರ ವರ್ಷಕ್ಕೆ ಹತ್ತು ಜನರಿಗೆ ಆಮ್ಲಜನಕ ನೀಡಬಲ್ಲದು. ಭೂಮಿ ಮೇಲೆ ಮೊದಲು 80% ಕಾಡಿತ್ತು. ಈಗ 30% ಕ್ಕೆ ಇಳಿದಿದೆ. ಒಂದು ಕಾರು ವರ್ಷವೆಲ್ಲಾ ಓಡಾಡಿದರೆ ಅದರಿಂದ ಪರಿಸರದ ಮೇಲೆ ಆಗುವ ಪರಿಣಾಮ ಸರಿದೂಗಿಸಲು ಒಂದು ಎಕರೆ ಅರಣ್ಯ ಬೇಕು. ನಮ್ಮ ಸಮಾಜ ಬುದ್ಧಿ ಕಲಿಯಬೇಕು ಅಂದರೆ ಇಂತಹ ಜಾಗೃತಿ ಕಾರ್ಯಗಳಾಗಬೇಕು. ತುಂಗಾ ಮೇಲ್ದಂಡೆಯಲ್ಲಿ ೨೦೦ ಎಕರೆ ಪ್ರದೇಶ ಸಿಗುತ್ತೆ, ಇಷ್ಟಕ್ಕೂ ಸಸಿ ನೆಡಬೇಕು ಎಂಬ ಇರಾದೆ ಇದೆ ಎಂದು ಸರ್ಜಿ ಡಾ. ಸರ್ಜಿ ಹೇಳಿದರು.

ಪರಿಸರಾಸಕ್ತರು ಹಾಗೂ ಆರ್ಥಶಾಸ್ತ್ರ ಪರಿಣತರೂ ಆದ ಬಿಎಂ ಕುಮಾರಸ್ವಾಮಿ ಮಾತನಾಡಿ, ಸರ್ಜಿ ಫೌಂಡೇಷನ್ ಪ್ರಾಯೋಜಿತ ಗಿಡನೆಡುವ ಕಾರ್ಯಕ್ರಮ ಅರ್ಥಗರ್ಭಿತವಾಗಿದೆ. ತುಂಗಾ ಮೇಲ್ದಂಡೆ ಎರಡೂ ಬದಿ ವಿಶಾಲವಾದ ಸರ್ಕಾರಿ ಜಮೀನಿದೆ. ಇದನ್ನ ಹೀಗೆ ಖಾಲಿ ಬಿಟ್ಟರೆ ಒತ್ತುವರಿ ಶುರುವಾಗುತ್ತೆ. ಈ ಜಾಗವನ್ನ ಉಳಿಸಿಕೊಳ್ಳುವ ಹಾಗೂ ಕಾಡನ್ನ ಬೆಳೆಸುವ ಕಾರ್ಯ ಈ ಕಾರ್ಯಕ್ರಮದಿಂದ ಕೈಗೂಡುತ್ತಿದೆ. ಬಹಳ ಮುಖ್ಯವಾಗಿ ಮಕ್ಕಳನ್ನೊಳಗೊಂಡ ಕಾರ್ಯಕ್ರಮ ಶ್ಲಾಘನೀಯ. ವಿಶ್ವಸಂಸ್ಥೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಆಗಾಗ ಎಚ್ಚೆರಿಸುತ್ತೆ ಆದರೆ ಜನ ಬದಲಾಗುತ್ತಿಲ್ಲ ಎಂದರು.