Ode to the west wind

Join Us on WhatsApp

Connect Here

ಬಿಸಿಲ ಬೇಗೆ, ಅರಣ್ಯದೊಳಗಿನ ನೀರು ಗುಂಡಿಗಳಿಗೆ ತುರ್ತಾಗಿ ಜಲಪೂರಣ

WhatsApp
Facebook
Twitter
LinkedIn

ಬೆಂಗಳೂರು: ಅರಣ್ಯದೊಳಗೆ ಮೃಗ ಪಕ್ಷಿಗಳಿಗೆ ನೀರಿನ ಕೊರತೆ ಆಗದಂತೆ ನೀರುಗುಂಡಿ (ವಾಟರ್ ಹೋಲ್)ಗಳಿಗೆ ಜಲಪೂರಣ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದು, ಅರಣ್ಯ ಇಲಾಖೆ ಕೆರೆ, ಕಟ್ಟೆಗೆ ನೀರು ತುಂಬಿಸುವ ಕಾರ್ಯ ಆರಂಭಿಸಿದೆ.

ಬಂಡೀಪುರ ರಕ್ಷಿತ ಅರಣ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅರಣ್ಯ ಸಚಿವರು, ಮಳೆಯ ಕೊರತೆಯಿಂದ ಬೇಸಿಗೆ ಪೂರ್ವದಲ್ಲೇ ಬಿರುಬಿಸಿಲು ಕಾಣಿಸಿಕೊಂಡಿದ್ದನ್ನ ಪರಿಶೀಲಿಸಿದ್ದರು. ನೀರಿಲ್ಲದೆ ಬರಿದಾಗುತ್ತಿರುವ ಜಲಗುಂಡಿಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ಇದರಿಂದ ನೀರು ಅರಸಿ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವ ಕಾರಣ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುವ ಅಪಾಯವಿದ್ದು, ತಕ್ಷಣವೇ ರಾಜ್ಯದಾದ್ಯಂತ ಕಾನನದೊಳಗಿರುವ ಜಲ ಗುಂಡಿಗಳಿಗೆ ಮರುಪೂರಣ ಮಾಡಿ ಜಿಪಿಎಸ್ ವಿಡಿಯೋ ಮತ್ತು ಚಿತ್ರ ಕಳುಹಿಸುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆ, ಕಾರ್ಯಪ್ರವೃತ್ತರಾಗಿರುವ ವಲಯ ಅರಣ್ಯಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ಅರಣ್ಯ ಸಂರಕ್ಷಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಅರಣ್ಯದೊಳಗಿನ ಕೆರೆ, ಕಟ್ಟೆ ಸೇರಿದಂತೆ ಎಲ್ಲ ಜಲಗುಂಡಿಗಳಿಗೆ ಸೌರ ಪಂಪ್ ಸೆಟ್ ಅಳವಡಿಸಿದ ಕೊಳವೆ ಬಾವಿಗಳಿಂದ ಮತ್ತು ಟ್ಯಾಂಕರ್ ಮೂಲಕ ನೀರು ಹಾಯಿಸುವ ಕಾರ್ಯ ಮಾಡುತ್ತಿದ್ದು, ಈ ವಿಡಿಯೋ ಮತ್ತು ಫೋಟೋಗಳನ್ನು ಸಚಿವರ ಕಚೇರಿಗೆ ಕಳುಹಿಸುತ್ತಿದ್ದಾರೆ.

ಈ ಎಲ್ಲ ಅಂಕಿ ಅಂಶ ಮತ್ತು ವಿಡಿಯೋ, ಫೋಟೋ ಪರಿಶೀಲನೆ ನಡೆಸಿರುವ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ಶೇ.50ಕ್ಕಿಂತ ಕಡಿಮೆ ನೀರು ಸಂಗ್ರಹ ಇರುವ ಮತ್ತು ಸಂಪೂರ್ಣ ಬತ್ತಿ ಹೋಗಿರುವ ಜಲಗುಂಡಿಗಳ ಪೈಕಿ ಕಾಡು ಪ್ರಾಣಿಗಳು ಹೆಚ್ಚಾಗಿ ಬರುವ ಕಡೆಗಳಲ್ಲಿ ಬರಿದಾಗಿರುವ ಮತ್ತು ಬರಿದಾಗುತ್ತಿರುವ ವಾಟರ್ ಹೋಲ್ ಗಳಿಗೆ ಆದ್ಯತೆಯ ಮೇಲೆ ನೀರು ಹಾಯಿಸಲು ಸೂಚಿಸಿದ್ದಾರೆ.

ಅರಣ್ಯದೊಳಗೆ ನಿಯಮಾನುಸಾರ ಅವಕಾಶ ಇರುವ ಕಡೆ ಕೊಳವೆ ಬಾವಿ ಕೊರೆಸಿ, ಸೌರ ಪಂಪ್ ಸೆಟ್ ಅಳವಡಿಸಿ ಅದಕ್ಕೆ ಆನೆ ದಾಳಿ ಮಾಡದಂತೆ ರೈಲ್ವೆ ಬ್ಯಾರಿಕೇಡ್ ಹಾಕಲು ಅಥವಾ ಇತರ ಯಾವುದೇ ಮೂಲಗಳಿಂದ ನೀರು ಹಾಯಿಸಲು ಮತ್ತು ಮೃಗಾಲಯಗಳಲ್ಲಿನ ಗುಂಡಿಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲು ಸೂಚನೆ ನೀಡಿದ್ದಾರೆ. 

ಒಟ್ಟಾರೆಯಾಗಿ ಮಳೆಗಾಲ ಆರಂಭವಾಗುವವರೆಗೆ ವನ್ಯಜೀವಿಗಳು ನೀರು ಹುಡುಕಿಕೊಂಡು ಅರಣ್ಯದಿಂದ ನಾಡಿಗೆ ಬಾರದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

You Might Also Like This