ಕಸ್ತೂರಿ ರಂಗನ್ ವರದಿ ಜಾರಿಗೆ ಬದ್ಧ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಮಲೆನಾಡಿನಲ್ಲಿ ಜನಾಂದೋಲನ ಆರಂಭವಾಗಿದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಬೃಹತ್ ಅಭಿಯಾನಕ್ಕೆ ಸಾಂಕೇತಿಕ ಆರಂಭ ನೀಡಿ ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ನಾವು ಇಂದು ಜಟಿಲ ಸಮಸ್ಯೆಯನ್ನು ಇಟ್ಟುಕೊಂಡು ಬೀದಿಗೆ ಇಳಿದಿದ್ದೇವೆ. ಅದು ಕಸ್ತೂರಿರಂಗನ್ ವರದಿ.! ಈಗಾಗಲೇ ನಮ್ಮ ಮೇಲೆ ಕಸ್ತೂರಿ ರಂಗನ್ ಕತ್ತಿ ತೂಗುತ್ತಿದೆ. ಅನೇಕ ಅರಣ್ಯ ಕಾಯ್ದೆಗಳು ನಮ್ಮನ್ನ ಬಾಧಿಸುತ್ತಿವೆ. ಸೊಪ್ಪು ಕಡಿಬೇಡಿ, ಹಾದಿ ಮಾಡ್ಬೇಡಿ, ಬಾವಿ ತೋಡಬೇಡಿ, ಅಡಕೆ ಮರಕ್ಕೆ ಔಷಧಿ ಹೊಡಿಬೇಡಿ, ಹೀಗೆ ಅನೇಕ ನಿಬಂಧನೆಗಳು ನಮ್ಮ ಕುತ್ತಿಗೆ ಬಿಗು ಮಾಡುತ್ತಿವೆ. ಪಶ್ಚಿಮ ಘಟ್ಟ ಕಳೆದುಕೊಂಡರೆ ಸಂಕಷ್ಟ ಎಂದು ಯಾವುದೋ ಸಂಘಟನೆ ವ್ಯಕ್ತಿಗೆ ಅನಿಸಿತು. ಅವನಿಗೆ ವಿದೇಶದಿಂದ ಹಣ ಹರಿದು ಬರುತ್ತೆ. ಗೋವಾದಲ್ಲಿ ಈ ಕುರಿತು ಎಡಪಂಥೀಯವರ ಒಂದು ಸಭೆ ಆಗುತ್ತೆ. ಅವರೇ ಪರಿಸರವಾದಿಗಳು ಎಂದು ಗುಂಪು ಸೇರಿಕೊಳ್ಳುತ್ತಾರೆ. ಅಂದಿನ ಕೇಂದ್ರ ಮಂತ್ರಿಗೆ ಆಹ್ವಾನ ನೀಡುತ್ತಾರೆ. ಹೀಗೆ ಅರಣ್ಯ ನಾಶವಾಗುತ್ತಿದೆ ಹಾಗಾಗಿ ಉಳಿಸುವ ನಿಟ್ಟಿನಲ್ಲಿ ಒಂದು ಸಮಿತಿ ಮಾಡಿ ಎಂದು ಮನವಿ ಮಾಡುತ್ತಾರೆ. ಆ ಮಂತ್ರಿ ಒಪ್ಪಿಕೊಂಡು ಬಂದು ಗಾಡ್ಗಿಲ್ ಸಮಿತಿ ರಚನೆ ಮಾಡುತ್ತಾರೆ. ಸಮಿತಿ ವರದಿ ನೀಡುತ್ತೆ. ಆದರೆ ಆ ವರದಿ ಪರಿಣಾಮಕಾರಿ ಅಲ್ಲ ಅಂತ ಮತ್ತೆ ವಾದ ಮಾಡಿಕೊಳ್ಳುತ್ತಾರೆ. ನಂತರ ಕಸ್ತೂರಿ ರಂಗನ್ ಎಂಬುವರನ್ನು ನೇಮಕ ಮಾಡುತ್ತಾರೆ. ಕಸ್ತೂರಿ ರಂಗನ್ ಒಬ್ಬ ಇಸ್ರೋ ವಿಜ್ಞಾನಿ. ಅವರು ಅರಣ್ಯ ತಜ್ಞ ಅಲ್ಲ. ಅವರು ದೆಹಲಿಯಲ್ಲಿ ಕೂತು ಸೆಟಲೈಟ್ ನಲ್ಲಿ ಫೋಟೋ ನೋಡಿ ಎಷ್ಟು ಎಕರೆ ಅರಣ್ಯ ಇದೆ ಎಂದು ಅಂದಾಜು ಮಾಡಿದ್ದಾರೆ. ಆ ಸೆಟಲೈಟ್ ನಲ್ಲಿ ನಮ್ಮ ಅಡಿಕೆ ತೋಟಗಳು ಕೂಡ ಕಾಡಾಗಿ ಕಾಣುತ್ತವೆ.
ಆ ಕಸ್ತೂರಿರಂಗನ್ ತೀರ್ಥಳ್ಳಿಗೆ ಕೊಡಗಿಗೆ ಅಥವಾ ಪಶ್ಚಿಮ ಘಟ್ಟದ ಯಾವುದೇ ಪ್ರದೇಶಕ್ಕೂ ಬರಲಿಲ್ಲ. ಪಶ್ಚಿಮ ಘಟ್ಟದಲ್ಲಿ ಕೇವಲ ಬೆಟ್ಟ ಗುಡ್ಡಗಳಿಲ್ಲ. ನಮ್ಮ ಬದುಕಿದೆ ಜೀವನ ಇದೆ ಎಷ್ಟೋ ವರ್ಷಗಳಿಂದ ನಾವು ಬದುಕುತ್ತಾ ಬಂದಿದ್ದೇವೆ. ಈ ಕಾಡನ್ನ ಉಳಿಸಿಕೊಂಡೇ ನಾವು ಬದುಕು ಸಾಗಿಸಿದ್ದೇವೆ. ಹಾಗಾಗಿ ನಮ್ಮ ಬದುಕಿಗೆ ಮುಳ್ಳಾಗುವ ಯಾವುದೇ ಕಾಯ್ದೆಯನ್ನ ನಾವು ಒಪ್ಪುವುದಿಲ್ಲ.
ಬಿಎಸ್ ಯಡಿಯೂರಪ್ಪ ಸರ್ಕಾರ ಇದ್ದಾಗ ಇದನ್ನ ವಿರೋಧಿಸಿ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆಗ ಹಸಿರು ಪೀಠಕ್ಕೆ ಹೋಗಿರುವ ಇದೇ ಗೋವಾ ಮೂಲದ ಸಂಘಟನೆ ಪುನಃ ಅದನ್ನ ಜಾರಿ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಗ್ರಾಮ ಸಭೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಬಿಟ್ಟು ಜಿಲ್ಲಾ ವಿಧಾನಸಭೆ ಮಾಡಿ ವರದಿ ನೀಡಿತ್ತು. ಸಿದ್ದರಾಮಯ್ಯ ಸರ್ಕಾರ ಗ್ರಾಮ ಸಭೆಗಳನ್ನು ಮಾಡಿ ಸರಿಯಾದ ಜಾಗೃತಿ ಮೂಡಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತು ಸ್ಪಷ್ಟನೆ ನೀಡಬೇಕು. ನಮ್ಮ ದುರಾದೃಷ್ಟವಶಾತ್ ಕಾಡು ಕಾಣದ ಕಡೆಯವರು ನಮ್ಮ ಅರಣ್ಯ ಮಂತ್ರಿ. ಅಲ್ಲಿನವರು ನೆರಳನ್ನೇ ಕಂಡಿರೋದಿಲ್ಲ, ನಮ್ಮ ಖರ್ಗೆ ನೋಡಿದ್ರೆ ಗೊತ್ತಾಗೋದಿಲ್ವಾ ಎಂದು ಆರಗ ಈಶ್ವರ್ ಖಂಡ್ರೆ ಜೊತೆ ಮಲ್ಲಿಕಾರ್ಜುನ ಖರ್ಗೆಯ ಬಣ್ಣವನ್ನೂ ವ್ಯಂಗ್ಯ ಮಾಡಿದ್ದಾರೆ.
ವಿಡಿಯೋ: Rainland FB page