Ode to the west wind

Join Us on WhatsApp

Connect Here

ಪ್ರವಾಸಿಗರ ಹುಚ್ಚಾಟ, ಆನೆಯಿಂದ ಬಿದ್ದ ಕಾವಾಡಿ, ಸಕ್ರೆಬೈಲ್‌ ಸರ್ಕಸ್‌ ಕಂಪನಿ ಆಗುತ್ತಿದೆಯೇ..?

WhatsApp
Facebook
Twitter
LinkedIn

ಶಿವಮೊಗ್ಗ: ಶಿವಮೊಗ್ಗದಿಂದ ಹದಿನೈದು ಕಿಲೋಮೀಟರ್‌ ಕ್ರಮಿಸಿದರೆ ಸಿಗುವ ಸಕ್ರೆಬೈಲು ಆನೆ ಬಿಡಾರ ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ. ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತೆ. ಇತ್ತೀಚೆಗಷ್ಟೇ ಇಲ್ಲಿನ ಹೊಣೆಗೇಡಿ ವೈದ್ಯನೊಬ್ಬ ಗರ್ಭಿಣಿ ಆನೆಯನ್ನ ದಸರಾ ಮೆರವಣಿಗೆ ಅಣಿಗೊಳಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆನೆ ಅಂಬಾರಿ ಹೊರುವ ಮುನ್ನಾ ದಿನ ಮರಿ ಹಾಕಿದರೂ ಅರಣ್ಯ ಇಲಾಖೆಯೊಳಗಿನ ಪ್ರಾಬಲ್ಯದಿಂದ ಈ ವೈದ್ಯ ಇನ್ನೂ ಉಳಿದುಕೊಂಡಿದ್ದಾನೆ. ಇದೇ ಕ್ಯಾಂಪಿನ ಇನ್ನೊಂದು ಗರ್ಭಿಣಿ ಆನೆಯ ಬಾಲವನ್ನ ಬಿಡಾರದ ಒಳಗೋ-ಹೊರಗೋ ಇರುವ ಕಿಡಿಗೇಡಿಗಳು ಅರ್ಧ ತುಂಡರಿಸಿದ್ದರು. ಇತ್ತೀಚೆಗಷ್ಟೇ ಚಿಕ್ಕಮಗಳೂರಿನಿಂದ ಆರೋಗ್ಯವಂತ ಕಾಡಾನೆ ಹಿಡಿದುಕೊಂಡು ಬಂದು ಕೂಡಿ ಹಾಕಿರುವ ಸಿಬ್ಬಂದಿ, ಆನೆ ಆರೋಗ್ಯವನ್ನ ಹದಗೆಡಿಸುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವಾಗಲೇ ಇನ್ನೊಂದು ಅವಾಂತರ ನಡೆದಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಶಂಷುದ್ದೀನ್.

ಶುಕ್ರವಾರ ಮುಂಜಾನೆ ತುಂಗಾ ನದಿ‌ ತೀರಕ್ಕೆ ಕುಂತಿ ಆನೆಯನ್ನ ಮೈ ತೊಳೆಯಲು ತರುತ್ತಿದ್ದ ಕಾವಾಡಿ ಶಂಷುದ್ದೀನ್‌, ಹಿಂಬದಿಯಿಂದ ಓಡಿ ಬರುತ್ತಿದ್ದ ಕುಂತಿ ಮರಿ ಧೃವನತ್ತ ಆನೆ ತಿರುಗಿಸುವ ವೇಳೆ ಮೇಲಿಂದ ನೆಲಕ್ಕುರುಳಿದ್ದಾರೆ. ಆದರೆ ಮೇಲೆ ಏಳಲೇ ಇಲ್ಲ. ತಕ್ಷಣ ಇಲ್ಲಿನ ಇತರೆ ಸಿಬ್ಬಂದಿ ಮೇಲಕ್ಕೆತ್ತಿದ್ದಾಗ ಕಾವಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆ ಮೆಗ್ಗಾನ್‌ಗೆ ಸಾಗಿಸಿ ಅಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಕೈ ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆ ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇಡೀ ವೃತ್ತಾಂತವನ್ನ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಹರಿ ಬಿಟ್ಟಿದ್ದು, ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆಯುವಾಗ ಯುವ ಜೋಡಿ ಪ್ರೀ ವೆಡ್ಡಿಂಗ್‌ ಶೂಟ್‌ ಡ್ರೆಸ್‌ನಲ್ಲಿ ಓಡಾಡುತ್ತಿರುವುದು ಕುಂಡು ಬಂದಿದ್ದು ಪರಿಸರಾಸಕ್ತರು ಕೆಂಡವಾಗಿದ್ದಾರೆ. ಜೊತೆಗೆ ಮರಿಯಾನೆ ಒಂದೇ ಲೀಲಾಜಾಲವಾಗಿ ಪ್ರವಾಸಿಗರ ಮಧ್ಯೆ ಓಡಿಕೊಂಡು ಬಂದಿದ್ದು ಜನ ಮರಿ ನೋಡಿ ಗದ್ದಲ ಎಬ್ಬಿಸುತ್ತಿರುವುದೂ ಕೂಡ ವಿಡಿಯೋದಲ್ಲಿದೆ.

ಈ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್‌ ಪ್ರಸನ್ನ ಕೃಷ್ಣ ಪಟಗಾರ್‌, ಅಲ್ಯಾವುದೂ ಪ್ರೀ ವೆಡ್ಡಿಂಗ್‌ ಶೂಟ್‌ ನಡೆಯುತ್ತಿರಲಿಲ್ಲ. ಶಾಲಾ ಮಕ್ಕಳು ಆನೆ ಮರಿಯನ್ನ ಕಂಡು ಕಿರುಚಾಡಿದ್ಧಾರೆ. ಆ ಮರಿ ತಾಯಿ ಹಿಂದೆ ನಡೆದುಕೊಂಡು ಬರುತ್ತಿತ್ತು. ಅದನ್ನ ನೋಡಲು, ಕುಂತಿ ಆನೆಯ ಮೇಲಿದ್ದ ಕಾವಾಡಿ, ಆನೆಯನ್ನ ಹಿಂದಕ್ಕೆ ತಿರುಗಿಸಿದ್ದಾನೆ. ಆನೆ ತಿರುಗುವ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದು, ಕಾವಾಡಿಯದ್ದೇ ಅಜಾಗರೂಕತನ. ಘಟನೆಯಿಂದ ಚೇತರಿಸಿಕೊಳ್ಳುತ್ತಿರುವ ಕಾವಾಡಿಗೆ ಎಲ್ಲಾ ತರಹದ ನೆರವು ನೀಡಿದ್ದೇವೆ ಎಂದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಂಷುದ್ದೀನ್‌, ಕುಂತಿ ಹಿಂದೆ ಬರುತ್ತಿದ್ದ ಮರಿ ಕಂಡು ಶಾಲಾ ಮಕ್ಕಳು ಕೂಗಿದರು. ಮರಿ ಹಿಂದೆ ಬರುತ್ತಿದ್ದನ್ನ ಮನಗಂಡ ತಾಯಿ ದಿಢೀರನೇ ತಿರುಗಿಬಿಡ್ತು. ನನಗೆ ತಲೆ ಸುತ್ತು ಬಂದು ಅಲ್ಲೇ ಬಿದ್ದೆ. ತಕ್ಷಣ ನಮ್ಮ ಹಿರಿಯ ಅಧಿಕಾರಿಗಳು ಬಂದು ನನ್ನನ್ನ ಆಸ್ಪತ್ರೆಗೆ ಕಳಿಸಿಕೊಟ್ಟರು. ಸದ್ಯ ಚೇತರಿಸಿಕೊಂಡಿದ್ದೇನೆ ಎಂದರು.

ಈ ಬಗ್ಗೆ ಮಾತನಾಡಿದ ಪರಿಸರಾಸಕ್ತ ನಿತಿನ್‌ ಹೇರಳೆ, ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರೀ-ವೆಡ್ಡಿಂಗ್‌ ಶೂಟಿಂಗ್‌ ಗೆ ಅವಕಾಶ ನೀಡಿದ್ದಾರೆ. ಪರ್ತಕರ್ತರು ಅಥವಾ ಪರಿಸರಾಸಕ್ತರಿಗೆ ಒಳಗಿನ ಅವ್ಯವಸ್ಥೆ ಭಯದಿಂದ ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಿಕೊಂಡಿದ್ದಾರೆ. ಆದರೆ ಇಂತಹ ಚಟುವಟಿಕೆಗಳಿಗೆ ಅವಕಾಶವಿದೆ ಎಂಬುದೇ ದುರಂತ. ಶ್ರೀಮಂತರ ಮಕ್ಕಳ ಲಾಭಿಗಂತೂ ಇಲ್ಲಿನ ಅಧಿಕಾರಿಗಳು ಮಣಿಯುತ್ತಾರೆ. ಸಕ್ರೆಬೈಲು ಸರ್ಕಸ್‌ ಕಂಪನಿ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ನಿತಿನ್ ಹೇರಳೆ, ಪರಿಸರಾಸಕ್ತ

You Might Also Like This