ಹಾಸನ:
ರಾತ್ರೋರಾತ್ರಿ ಕೋಟ್ಯಂತರ ರುಪಾಯಿ ಬೆಲೆಬಾಳುವ ಮರಗಳ ಹನನ ಮಾಡಿರುವ ಆರೋಪ ಬಿಜೆಪಿ ಎಂಪಿ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ ಅವರಿಗೆ ಸುತ್ತಿಕೊಂಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಬೆಲೆಬಾಳುವ ಮರಗಳ ಮಾರಣಹೋಮಕ್ಕೆ ವಿಕ್ರಮ್ ಕಾರಣ ಎಂದು ಆರೋಪಿಸಲಾಗಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕು ತಹಸೀಲ್ದಾರ್ ಮಮತಾ ಎಂಬುವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವ ವಿಡಿಯೋವನ್ನ ಪ್ರಕಟಿಸಿ ಪ್ರತಾಪ್ ಸಿಂಹ ಹಾಗೂ ಬಿಜೆಪಿಗೆ ಚಾಟಿ ಬೀಸಿದೆ.

ಪೋಸ್ಟ್ ನಲ್ಲಿ ಏನಿದೆ.?
ಅಣ್ಣ ಪ್ರತಾಪ್ ಸಿಂಹ ಸಂಸತ್ ದಾಳಿಕೋರರಿಗೆ ಪಾಸ್ ನೀಡುವ ಕೆಲಸದಲ್ಲಿದ್ದರೆ, ತಮ್ಮ ವಿಕ್ರಮ್ ಸಿಂಹ ಸಿನಿಮೀಯ ಮಾದರಿಯಲ್ಲಿ ಮರಗಳ್ಳತನದಲ್ಲಿ ತೊಡಗಿದ್ದಾನೆ.
ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಸೀಲ್ದಾರ್ ಮಮತಾ ಅವರ ಮೂಲಕ ಬೆಳಕಿಗೆ ಬಂದಿದೆ. ಇದರಲ್ಲಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಕೈಜೋಡಿಸಿದ್ದು ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅದೇಶಿಸಲಿದ್ದಾರೆ.
Dear Karnataka BJP ನಿಮ್ಮ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರು ಕೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾಗಿರುವುದೇಕೆ? ಹೀಗೆ ಕುಟುಕಿದ್ದಾರೆ.
ಇನ್ನು ಈ ಘಟನೆ ರಾಜಕೀಯ ಸ್ವರೂಪ ಪಡೆಯುತ್ತಿದ್ದು ಈ ಜಾಗ ಅಸಲಿಗೆ ಶುಂಠಿ ಬೆಳೆಯಲು ವಿಕ್ರಮ್ ಸಿಂಹ ಒಂದು ವರ್ಷದ ಕರಾರಿಗೆ ತೆಗೆದುಕೊಂಡು, ಇಲ್ಲಿರೋ ಮರಗಳನ್ನೂ ತನ್ನ ಪ್ರಭಾವ ಬಳಸಿ ಸಾಗಿಸಲು ಮುಂದಾಗಿದ್ದಾರೆಂದು ಆರೋಪಿಸಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿ ನಂದಗೊಂಡನನಹಳ್ಳಿ ಗ್ರಾಮದಲ್ಲಿ ನಾರಾಣಯ ಶೆಟ್ಟಿ ಎಂಬುವರಿಗೆ ಸೇರಿಸ ಸ್ವಲ್ಪ ಜಮೀನಿದೆ. ಅವರ ಮಗಳು ಜಯಮ್ಮ ಎಂಬುವರು ವಿಕ್ರಮ್ ಜೊತೆ ಮೂರು ಎಕರೆ ಜಾಗಕ್ಕೆ ಒಂದು ವರ್ಷಕ್ಕೆ 1 ಲಕ್ಷ 70 ಸಾವಿರ ರೂಪಾಯಿ ಹಾಗೂ ಜಮೀನಿಗೆ ಹೊಡೆಸಿದ ಬೋರ್ ವೆಲ್ ಬಿಟ್ಟು ಹೋಗುವಂತೆ ಕರಾರು ಮಾಡಿಕೊಂಡಿರುತ್ತಾರೆ. ಆನಂದ್ ಎಂಬುವರು ಒಂದನೇ ಪಾರ್ಟಿಯಾಗಿ ಸಹಿ ಹಾಕಿರುತ್ತಾರೆ. ಈ ಜಾಗದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಮರಗಳನ್ನ ವಿಕ್ರಮ ಸಿಂಹ ಕಡಿದು ಸಾಗಿಸಲು ಯತ್ನಿಸಿದ್ದಾರೆ ಎಂಬ ಆರೋಪ ಸ್ಥಳೀಯ ಹೋರಾಟಗಾರ ದೀಪಕ್ ಮಾಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಪ್ರಕರಣ ಗೊಂದಲಮಯವಾಗಿದ್ದು ವಿಕ್ರಮ ಸಿಂಹ ಎಷ್ಟು ಜಾಗ ಇಲ್ಲಿ ಕರಾರಿಗೆ ಪಡೆದಿದ್ದರು. ಕರಾರಿನ ಉದ್ದೇಶ ಸಾಗುವಳಿನಾ, ಹೇಮಾವತಿ ನದಿ ಮುಳುಗಡೆ ಸಂತ್ರಸ್ತರ ಜಮೀನಿನಲ್ಲಿದ್ದ ಮರಗಳು, ಗೋಮಾಳದಲ್ಲಿ ಬೆಳೆದಿದ್ದ ನಾನಾ ವಿಧದ ಬೃಹತ್ ವೃಕ್ಷಗಳನ್ನ ಸಾಗಿಸುವುದಾಗಿತ್ತಾ. ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿನ ಒಬ್ಬ ಮಾಲೀಕನ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಮುಚ್ಚಿ ಹಾಕಲು ಪ್ರಯತ್ನಪಟ್ಟರಾ.? ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡದಿದ್ದರೆ ಇದು ಮುಚ್ಚಿ ಹೋಗುತ್ತಿತ್ತಾ ಎನ್ನುವ ಅನುಮಾನಗಳು ಕಾಡುತ್ತಿವೆ.