
ಶರಾವತಿ ನದಿ, ನಾಡಿಗೆ ಬೆಳಕಾದರೆ ಮಲೆನಾಡಿಗರಿಗೆ ಶಾಪ ಎಂಬ ಮಾತಿದೆ. ನದಿ ಸಾಗುವ ಉದ್ದಕ್ಕೂ ಚಾಚಿಕೊಂಡಿರುವ ಊರುಗಳು ಇಂದಿಗೂ ಮುಳುಗಡೆ ಸಂತ್ರಸ್ತರ ಕಥೆ ಹೇಳುತ್ತವೆ. ಹೊಸನಗರ ಹಾಗೂ ಸಾಗರದಲ್ಲಿ ಹರಿವ ಶರಾವತಿ ನದಿಗೆ ಅಲ್ಲಲ್ಲಿ ಸೇತುವೆಗಳ ಅಗತ್ಯವಿದೆ. ಆದರೆ ನದಿಯೊಳಗೆ ಸೇತುವೆ ಕಟ್ಟುವ ಕಾಯಕ ದುಸ್ತರವಾಗಿತ್ತು. ಈಗೆಲ್ಲಾ ಆಧುನಿಕ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹತ್ತು ವರ್ಷಗಳ ಹಿಂದೆ ದಡದಾಚೀಚೆ ಸಂಬಂಧ ಬೆಸೆವ ಸಂಪರ್ಕ ಸೇತುವೆಗಳ ಕನಸು ಕಂಡಿದ್ದ ಹರತಾಳು ಹಾಲಪ್ಪ ನನಸಾಗಿಸುತ್ತಾ ಬಂದರು. ಅದರಲ್ಲೊಂದು ಒಳನಾಡಿನಲ್ಲಿಯೇ ರಾಜ್ಯದಲ್ಲೇ ಎತ್ತರದ ಸೇತುವೆ ಎಂದು ಖ್ಯಾತಿ ಪಡೆದಿರುವ ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ.
ದಶಕದ ಕಠಿಣ ಪರಿಶ್ರಮದಿಂದ ಎರಡು ವರ್ಷಗಳ ಹಿಂದೆ ಸಂಚಾರ ಮುಕ್ತವಾಗಿ ಕಳೆದ ವರ್ಷ ಉದ್ಘಾಟನೆಯಾಯ್ತು. ಈ ಸೇತುವೆ ಈ ಭಾಗದ ಜನರಿಗೆ ವರದಾನವಾಗಿದೆ. ಇದರ ನೆನಪಿಗೆ ಪ್ರತೀ ವರ್ಷ ಹಿನ್ನೀರ ಹಬ್ಬ ಎಂಬ ಸುಂದರ ಕಾರ್ಯಕ್ರಮವನ್ನ ಶಾಸಕ ಹಾಲಪ್ಪ ಆಯೋಜಿಸುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷವೂ ಸಹ ಅಹೋರಾತ್ರಿ ಪಟಗುಪ್ಪ ಹಿನ್ನೀರ ಹಬ್ಬ ಶನಿವಾರ ರಾತ್ರಿ ಸೇತುವೆ ಬಳಿ ಜರುಗಿತು. ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಖಾದ್ಯಗಳ ಮೇಳ, ಶಾಸ್ತ್ರೋಕ್ತ ಶರಾವತಿ ಆರತಿ ಜನಮನಸೊರೆಗೊಂಡವು.
ಶರಾವತಿ ನದಿ ತಟದಲ್ಲಿ ಪಟಗುಪ್ಪ ಸೇತುವೆ ಕೆಳಗೆ ಆರತಿ ಕಾರ್ಯಕ್ರಮದಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ಮುಖಂಡರು ಹಾಗೂ ಜನರೊಂದಿಗೆ ನದಿಗೆ ಆರತಿ ಬೆಳಗಿದರು. ಇಡೀ ನದಿ ದಡ ಸಾಲು ಸಾಲು ದಂದಿಗಳಿಗೆ ಸಾಕ್ಷಿಯಾಯ್ತು.

ಮಾಧ್ಯಮಗಳೊಂದಿಗೆ ಮಾತನಾಡಿ, ಅಂದು ಶರಾವತಿಗೆ ಮೊದಲ ಸೇತುವೆಯಾಗಿ ಸಿಗಂದೂರು ಬಳಿಯ ಮಡೆನೂರು ಹಳ್ಳಿಯಲ್ಲಿ ಸೇತುವೆ ಕಟ್ಟಿದ್ದರು. ಲಿಂಗನಮಕ್ಕಿ – ಮಡೆನೂರು ಸೇತುವೆ ಸೇರಿ ಈ ನದಿಗೆ ಸೇತುವೆ ಮೇಲೊಂದು ಸೇತುವೆಗಳಾಗಿ ಈ ಹಾದಿಗಳೆಲ್ಲಾ ಮುಳುಗಿ ಹೋದವು. ನಂತರ ಈ ಸಂಪರ್ಕವೇ ಕಡಿದು ಹೋಯ್ತು. ನಂತರ ಹೊಸ ಹೆದ್ದಾರಿಯನ್ನ ಬಟ್ಟೆಮಲ್ಲಪ್ಪ ಎಂಬ ಊರಿನ ಮೂಲಕ ಸಾಗರಕ್ಕೆ ಸಂಪರ್ಕ ಸಾಧಿಸುವಂತೆ ಮಾಡಿದರು. ಈ ಹೆದ್ದಾರಿ ಸುತ್ತು ಹಾಕಿ ಹೋದರೆ ನಲವತ್ತೆರಡು ಕಿಲೋಮೀಟರ್ ಹೆಚ್ಚುವರಿ ಕ್ರಮಿಸಬೇಕಿತ್ತು. ನಾನು ಮೊದಲ ಸಲ ಹೊಸನಗರ ಶಾಸಕನಾದಗ ಜನ ಪಟಗುಪ್ಪ ಸೇತುವೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ಭಾಗದಲ್ಲಿ ಜನ ಸೇತುವೆ ನಿರೀಕ್ಷೆ ಮರೆತ್ತಿದ್ದರು. ‘ಈ ಸೇತುವೆ ಆಗೋದೂ ಒಂದೇ ನಮ್ಮ ಮನೆ ಹುಡುಗನಿಗೆ ಬುದ್ಧಿ ಬರೋದೂ ಒಂದೇ’ ಎಂದು ಆಡಿಕೊಳ್ಳುತ್ತಿದ್ದರು. ನಾನು ಸವಾಲಾಗಿ ಸ್ವೀಕರಿಸಿ ನಿರ್ವಹಿಸಿದೆ. ಅಂದು ಉಪಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಒತ್ತಾಸೆಯಾಗಿ ನಿಂತರು ಎಂದು ಹಾಲಪ್ಪ ಹೇಳಿದರು.
ಸೇತುವೆ ಹಿನ್ನೆಲೆ:
ಶರಾವತಿ ಹಿನ್ನೀರಿನಲ್ಲಿ ಹೊಸನಗರ ಪಟ್ಟಣದಿಂದ ಇಪ್ಪತ್ತು ಕಿಲೋಮೀಟರ್ ದೂರಲ್ಲಿ ಪಟಗುಪ್ಪ ಎಂಬಲ್ಲಿ ಸಾಗರ ತಾಲೂಕು ಸಂಪರ್ಕಿಸುವ ಸೇತುವೆ ಇತ್ತು. ಮಳೆಗಾಲದಲ್ಲಿ ಪೂರ್ಣ ಮುಳುಗುತ್ತಿತ್ತು. 2007ರಲ್ಲಿ ಅಂದು ಹೊಸನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿತ್ತು. ಅಲ್ಲಿಂದ ಹರತಾಳು ಹಾಲಪ್ಪ ಆರಿಸಿಬಂದಿದ್ದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಸ್ಥಳ ಪರಿಶೀಲನೆ ಮಾಡಿ ಎಂಟು ಕೋಟಿ ವೆಚ್ಚದಲ್ಲಿ ಸೇತುವೆ ಮಾಡಲು ಅನುಮೋದನೆ ನೀಡಿದ್ದರು. ಹಾಲಪ್ಪ ಅಡಿಗಲ್ಲು ಹಾಕಿದ್ದರು. ಮರು ವರ್ಷವೇ ಕೆಲಸ ಆರಂಭವಾಗಿತ್ತು. ನಂತರ ಹೊಸನಗರ ಕ್ಷೇತ್ರ ಒಡೆದು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿದ್ದರಿಂದ, ಪಟಗುಪ್ಪವೂ ಆ ಕಡೆ ಸೇರಿತು. ಸಾಗರ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಮುತುವರ್ಜಿ ವಹಿಸಲಿಲ್ಲ. ಇಡೀ ಸೇತುವೆ ಕಾರ್ಯ ಕುಂಟುತ್ತಾ ಸಾಗಿತು. ನಂತರ ಸಾಗರಕ್ಕೆ ಕಾಗೋಡು ತಿಮ್ಮಪ್ಪ ಆರಿಸಿ ಬಂದ ಬಳಿಕ ಸೇತುವೆ ಕಾಮಗಾರಿ ವೇಗ ಪಡೆದುಕೊಂಡಿತು. ಪುನಃ ಸಾಗರದಿಂದ ಸ್ಪರ್ಧಿಸಿದ ಹಾಲಪ್ಪ ಶಾಸಕರಾದರು. 2022 ರ ಮಾರ್ಚ್ ಲ್ಲಿ ಸೇತುವೆ ಉದ್ಘಾಟನೆಯಾಯ್ತು. ಒಟ್ಟು 56 ಕೋಟಿ ರೂ ವೆಚ್ಚದಲ್ಲಿ 13 ಫಿಲ್ಲರ್ ಮೇಲೆ 560 ಮೀಟರ್ ಉದ್ದ ವಿದೆ. ಸೇತುವೆ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತಿದೆ. ಸುತ್ತಲ ರಮಣೀಯ ಪರಿಸರ, ಹಿನ್ನೀರಿನಲ್ಲಿ ಮೀನುಗಾರರ ದೋಣಿಗಳು, ಸೂರ್ಯಾಸ್ತದಂತಹ ವಿಹಂಗಮ ನೋಟ ಜನರನ್ನ ಆಕರ್ಷಿಸುತ್ತಿದೆ. ಈ ಮಾರ್ಗದಿಂದ ಈ ಭಾಗದ ಜನರ ಸಾಗರ ಸಂಪರ್ಕ ಸಮೀಪವಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಸಹ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೀರ ಹಬ್ಬ ಸಾಂಗವಾಗಿ ಜರುಗಿದೆ. ನೂರಾರು ಜನ ರಾತ್ರಿಯಿಡೀ ಇದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
video: