ತಾಯಿಯಿಂದ ಬೇರ್ಪಟ್ಟಿದ್ದ ಏಳು ತಿಂಗಳ ಮರಿಯಾನೆಯನ್ನ ಆನೆಗಳ ಹಿಂಡಿನ ಜೊತೆ ಸೇರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದು ಮರಿಯಾನೆ ದಾರುಣ ಅಂತ್ಯ ಕಂಡಿದೆ. ಕೆಲ ದಿನಗಳ ಹಿಂದೆ ಹಾಸನದ ಬೇಲೂರು ತಾಲೂಕು ಕಾನನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಮರಿಯ ಜೊತೆ ಆಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ತುಂಟ ಆನೆ ಮರಿ ಬಾ ಎಂದು ಕರೆದರೆ ಸಾಕು ಬರುತ್ತಿತ್ತು. ಅಷ್ಟರಲ್ಲಾಗಲೇ ಎರಡು ಮೂರು ಆನೆಗಳ ಗುಂಪುಗಳು ಈ ಭಾಗದ ಕಾಫಿ ತೋಟದಲ್ಲಿ ಓಡಾಡುತ್ತಿದ್ದವು. ಹೇಗಾದರೂ ಮಾಡಿ ತಪ್ಪಿಸಿಕೊಂಡ ಆನೆ ಮರಿಯನ್ನ ಗುಂಪಿನೊಂದಿಗೆ ಸೇರಿಸಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಪಟ್ಟಿದ್ದರು.

ಎರಡು ಕಾಡಾನೆ ಗುಂಪಿನೊಂದಿಗೆ ಸೇರಿಸಿದ್ದ ಸಿಬ್ಬಂದಿ ಪಯತ್ನ ವಿಫಲವಾಗಿತ್ತು. ಮರಿ ಕಾಡಾನೆ ಹಿಂಡಿನೊಂದಿಗೆ ಹೋಗದೇ
ಬೇಲೂರು ತಾಲ್ಲೂಕಿನ, ಕೋಗೋಡು ಗ್ರಾಮದ ಕಾಫಿ ತೋಟದಲ್ಲೇ ಉಳಿದುಕೊಂಡಿತ್ತು. ಆದರೆ ಸ್ಥಳೀಯರು ಮರಿಯಾನೆಗೂ ಕಿರಿಕಿರಿ ಮಾಡಿ, ಉಳಿದ ಆನೆಗಳು ಬಂದು ಉಪಟಳ ನೀಡುತ್ತವೆ ಎನ್ನತೊಡಗಿದರು.
ಬಳಿಕ ಮರಿಯಾನೆಯನ್ನ
ಅರೇಹಳ್ಳಿ ಬಳಿಯ ಕಾಡಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಿಟ್ಟಿದ್ದರು. ಬಳಿಕ ಆಗಾಗ ರಸ್ತೆಯಲ್ಲಿ ಅಲೆದಾಡುತ್ತಿದ್ದ ಮರಿಯಾನೆ
ಹೇಗೋ ಕಾಡಾನೆ ಗುಂಪಿನೊಂದಿಗೆ ಸೇರಿಕೊಂಡಿತ್ತು. ಆದರೆ ಶನಿವಾರದಂದು ಕಾಫಿ ತೋಟದಲ್ಲಿ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಾಮಾನ್ಯವಾಗಿ ಆನೆಗಳ ಹಿಂಡು ಬೇರೊಂದು ಆನೆ ಹಿಂಡಿನೊಂದಿಗೆ ಸೇರೋದಿಲ್ಲ. ಅದರಲ್ಲೂ ತಾಯಿ ಕಳೆದುಕೊಂಡದ್ದೇ ಆದರೆ ಮರಿ ಆನೆಯನ್ನ ಯಾವ ಆನೆಯೂ ಹತ್ತಿರ ಬಿಟ್ಟುಕೊಳ್ಳೋದಿಲ್ಲ. ಅಂತಹ ಮರಿಗಳು ಅಕ್ಷರಶಹಃ ತಬ್ಬಲಿಗಳಾಗಿಯೇ ಇರುತ್ತವೆ. ಕೆಲವೊಮ್ಮೆ ಹಿಂಡಿನಲ್ಲಿರೋ ಗಂಡು ಆನೆಗಳು ಘಾಸಿಗೊಳಿಸುವ ಸಾಧ್ಯತೆ ಇರುತ್ತೆ. ಇಷ್ಟೆಲ್ಲಾ ಅರಿತ ಇಲಾಖೆ ಸಿಬ್ಬಂದಿಯೇಕೆ ವ್ಯರ್ಥ ಪ್ರಯತ್ನ ಮಾಡಿದರು ಎಂಬುದೇ ಪ್ರಶ್ನಾರ್ಥಕ..!