ಗೋಪೂಜೆ ದಿನ ಬಂಗಾರದ ಸರ ನುಂಗಿದ್ದ ಹಸುವನ್ನ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಪ್ರಾಣ ಉಳಿಸಿರುವ ಘಟನೆ ಹೊಸನಗರ ತಾಲೂಕು ಮತ್ತಿಮನೆ ಎಂಬಲ್ಲಿ ನಡೆದಿದೆ. ಇಲ್ಲಿನ ಶ್ಯಾಮ್ ಉಡುಪ ಎಂಬುವರ ಮನೆಯ ಹಸುವಿನ ಹೊಟ್ಟೆ ಸೇರಿದ್ದ ಹನ್ನೆರಡು ಗ್ರಾಂ, ಅಂದಾಜು ೭೦ ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರವನ್ನ ಹೊರ ತೆಗೆಯಲಾಗಿದೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಪಶುವೈದ್ಯ ಡಾ. ಆನಂದ್ ಜೀ ಎಂಬುವರು ಹಸುವಿಗೆ ಶಸ್ತ್ರಚಿಕಿತ್ಸೆ ಕೊಟ್ಟಿಗೆಯಲ್ಲೇ ಏರ್ಪಾಡು ಮಾಡಿ, ಹಸುವಿನ ಪ್ರಾಣವನ್ನೂ ಸಹ ಉಳಿಸಿರುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಏನಿದು ಘಟನೆ..?

ಮಲೆನಾಡಿನಲ್ಲಿ ದೀಪಾವಳಿ ಸಮಯ ಗೋ ಪೂಜೆ ಬಹಳ ಮುಖ್ಯವಾದ ಹಬ್ಬ. ಈ ಸಮಯದಲ್ಲಿ ಗೋವುಗಳಿಗೆ ನಾನಾ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಅಕ್ಕಿ ಜೊತೆ ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನ ನೀಡುತ್ತಾರೆ. ಗೋಪೂಜೆ ವೇಳೆ ಬಂಗಾರದ ಒಡವೆಗಳನ್ನ ಸಹ ಕೆಲವೆಡೆ ಇಟ್ಟು ಪೂಜೆ ಮಾಡುವ ಪದ್ಧತಿ ಇದೆ. ದಿವಂಗತ ಶ್ಯಾಮ್ ಉಡುಪ ಪತ್ನಿ ಸತ್ಯವತಿ ಕೂಡ ಎಡೆ ಮೇಲೆ ಅಕ್ಕಿ, ಜೊತೆಗೆ ಚಿನ್ನದ ಸರವನ್ನೂ ಇಟ್ಟಿದ್ದರು. ಅಕ್ಕಿ ಆಸೆಗೆ ದನ ಚಿನ್ನದ ಸರದೊಂದಿಗೆ ಎಡೆ ಎಳೆದುಕೊಂಡು ನುಂಗಿತ್ತು. ಪೂಜೆಗೆಂದು ಕಟ್ಟಿದ್ದ ಒಂದೇ ದನವಾದ್ದರಿಂದ ಎಡೆ ಕೂಡ ದನದ ಹೊಟ್ಟೆ ಸೇರಿಯಾಗಿತ್ತು. ಬೆಳಗ್ಗೆ ಸೆಗಣಿಯಲ್ಲಿ ಸಿಗಬಹುದು ಎಂದುಕೊಂಡಿದ್ದರೂ ಸಹ ಸಿಗಲೇ ಇಲ್ಲ. ತುಂಬಾ ದಿನ ಕೊಟ್ಟಿಗೆಯಲ್ಲಿ ಪರಿಶೀಲನೆ ಮಾಡಿ ಸೋತಿದ್ದರು. ಚಿನ್ನದ ಸರಕ್ಕಿಂತ ಹೊಟ್ಟೆಯಲ್ಲೇ ಸಿಲುಕಿಕೊಂಡು ಇನ್ನೇನಾಗಬಹುದೋ ಎಂಬ ಆತಂಕ ಕಾಡಿತ್ತು. ದಿನ ಕಳೆದಂತೆ ಮೇವನ್ನೂ ಕೂಡ ನಿರಾಕರಣೆ ಮಾಡತೊಡಗಿತು. ಈ ಸಮಯದಲ್ಲಿ ಪಶುವೈದ್ಯ ಆನಂದ್ ಅವರನ್ನ ಸಂಪರ್ಕ ಮಾಡಿದಾಗ ಪೂರ್ಣ ಮಾಹಿತಿ ಸಿಕ್ಕಿತ್ತು.
ಪ್ಲಾಸ್ಟಿಕ್, ಲೋಹದ ವಸ್ತುಗಳು ಸೆಗಣಿಯಲ್ಲಿ ಬೀಳೋದಿಲ್ಲ..!

ಈ ಕುರಿತು ಮಾಹಿತಿ ನೀಡಿದ ವೈದ್ಯ, ಚಿನ್ನದ ಸರ ನುಂಗಿದ ಮೇಲೆ ಅದು ಮೇವು ಬಿಟ್ಟಿತ್ತು. ಹೊಟ್ಟೆ ಉಬ್ಬರಿಸಿಕೊಂಡಿತ್ತು. ಸರ ಉದ್ದವಾಗಿತ್ತು ಹಾಗಾಗಿ ಮೇವಿಗೆ ಸಿಲುಕಿಕೊಂಡಿತ್ತು. ಎರಡನೇ ಹೊಟ್ಟೆ ರೆಟಿಕ್ಯುಲಮ್‌ನಲ್ಲಿ ಸಿಲುಕಿಕೊಂಡಿತ್ತು. ದನ ಅಗೆದು ನುಂಗಿದ್ದರಿಂದ, ಸರ ಚೂಪಾಗಿ ಮುಂದಿನ ದಿನಗಳಲ್ಲಿ ದನಕ್ಕೆ ಮಾರಣಾಂತಿಕವಾಗಿ ಪರಿಣಮಿಸಲಿತ್ತು. ಇಂತಹ ವಸ್ತುಗಳು ಜೀರ್ಣಪ್ರಕ್ರಿಯೆಯಿಂದ ಸೆಗಣಿ ರೂಪದಲ್ಲಿ ಬರೋದಿಲ್ಲ. ಅಲ್ಲಿಯೇ ಶೇಖರಣೆಯಾಗುತ್ತವೆ. ಮಾಲೀಕರು ಏನಾದರೂ ಮಾಡಿ ಉಳಿಸಿಕೊಡಿ ಎಂದು ಕೇಳಿಕೊಂಡರು. ಆದರೆ ಈ ದನವನ್ನ ಎಲ್ಲಿಯೂ ದೂರ ತೆಗೆದುಕೊಂಡು ಹೋಗಿ ಆಪರೇಷನ್ ಮಾಡಿ ಪುನಃ ವಾಹನದಲ್ಲಿ ತಂದು ಬಿಡೋದಕ್ಕೆ ಆಗೋದಿಲ್ಲ. ಎಲ್ಲಾ ತರಹದಲ್ಲೂ ಸಮಸ್ಯೆ ಹಾಗಾಗಿ ಅವರ ಮನೆಯಲ್ಲೇ ವ್ಯವಸ್ಥೆ ಮಾಡಿಕೊಂಡು ಮೂರು ಗಂಟೆ ಸಮಯದಲ್ಲಿ ಕಳೆದ ಭಾನುವಾರ ಆರು ಅಂಗುಲ ಶಸ್ತ್ರ ಚಿಕಿತ್ಸೆ ಮಾಡಿ ಸರ ಹೊರಗೆ ತೆಗೆಯಲಾಗಿದೆ. ಸದ್ಯ ಹಸು ಆರೋಗ್ಯವಾಗಿದೆ ಎಂದರು.
ಒಟ್ಟಿನಲ್ಲಿ ಮಲೆನಾಡಿನ ಗೋವು ಪೂಜೆಯಲ್ಲಿನ ಅಚಾತುರ್ಯ ಹಸುವಿಗೆ ಪ್ರಾಣಕ್ಕೆ ಕಂಟಕವಾಗಿ ಆತಂಕ ಸೃಷ್ಟಿಯಾಗಿತ್ತು. ಆದರೆ ಚಾಣಾಕ್ಷ ವೈದ್ಯರ ಸಹಾಯದಿಂದ ದೂರವಾಯ್ತು.