ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವ ವಿಶ್ರಾಂತಿ ಗೃಹದ ಶೌಚಾಲಯದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ಇಡೀ ಪ್ರಕರಣ ಹಲವು ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಶವವನ್ನ ಮತ್ತೊಂದೆಡೆಗೆ ಸಾಗಿಸಲು ಹುನ್ನಾರ ನಡೆಸಲಾಗಿತ್ತು ಅಷ್ಟರಲ್ಲಾಗಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿಟ್ರು ಎಂಬುದು ಆರೋಪ.

ಚಿಕ್ಕಮಗಳೂರು ತಾಲೂಕು, ಹೊಸಪೇಟೆ ಬಳಿಯ ಕೋಟೆ ಎಂಬ ಗ್ರಾಮದಲ್ಲಿದೆ ಈ ಶಿಬಿರ ಶೌಚಾಲಯದ ಕೋಣೆಯೊಂದರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರೋದು ಇಡೀ ಊರಿನ ಜನರು ಆಕ್ರೋಶಗೊಳ್ಳಲು ಕಾರಣವಾಗಿತ್ತು. ಅಸಲಿಗೆ ಆ ವ್ಯಕ್ತಿ ಯಾರು, ಎಲ್ಲಿಯವನು ಎಂಬುದೇ ನಿಗೂಢವಾಗಿತ್ತು. ಆದ್ರೆ ಕೆಲ ಅರಣ್ಯ ಸಿಬ್ಬಂದಿಗಳ ನಡೆ ಮಾತ್ರ ಸ್ಥಳೀಯರು ರೊಚ್ಚಿಗೇಳಲು ಪ್ರೇರೇಪಿಸಿತ್ತು.
ಶ್ರೀಗಂಧ ಕಡಿಯಲು ಅರಣ್ಯಕ್ಕೆ ಶಿವಮೊಗ್ಗ ಮೂಲದ 5 ಜನರ ಗ್ಯಾಂಗ್ ಬಂದಿತ್ತು. ಅವರನ್ನ ಬೆನ್ನಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಇಬ್ಬರನ್ನ ವಶಕ್ಕೆ ಪಡೆಯಲು ಯಶಸ್ವಿಯಾಗಿದ್ರು. ಹೀಗೆ ಇಬ್ಬರನ್ನ ಕ್ವಾಟ್ರಸ್ಗೆ ಕರೆ ತಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಚಾರಣೆಗೆ ಒಳ ಪಡಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಹೊಸಪೇಟೆಯ ಫಾರೆಸ್ಟ್ ಕ್ವಾಟ್ರಸ್ನಲ್ಲಿ ವ್ಯಕ್ತಿಯನ್ನ ಥಳಿಸಿ ಸಮೀಪದ ಕೋಟೆ ಗ್ರಾಮದ ಆನೆ ಶಿಬಿರದ ಶೌಚಾಲಯದಲ್ಲಿ ತಂದಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ, ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಕೆಂಡಾ ಮಂಡಲವಾದ್ರು.

ಈ ಪ್ರಕರಣ ಬೇರೆ ದಿಕ್ಕನ್ನೇ ಪಡೀತಿದೆ ಅನ್ನೋದನ್ನ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳದಲ್ಲಿ ಹೆಚ್ಚು ಖಾಕಿ ಪಡೆ ಇರುವಂತೆ ನೋಡಿಕೊಂಡ್ರು. ಡಿವೈಎಸ್ಪಿ, ನಾಲ್ಕು ಮಂದಿ ಸರ್ಕಲ್, 5 ಮಂದಿ ಪಿಎಸ್ಐ ಗಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಎಫ್ಓ, ಸದ್ಯ ಮೃತ ಪಟ್ಟಿರೋ ವ್ಯಕ್ತಿ ಶಿವಮೊಗ್ಗ ಮೂಲದ ರವಿ ಎಂಬಾತ. ಈತ 5 ಜನರನ್ನೊಡಗೂಡಿ ಶ್ರೀಗಂಧ ಕಳವಿಗೆ ಅರಣ್ಯಕ್ಕೆ ಬಂದಿದ್ದ. ನಮ್ಮವರು ಅವರನ್ನ ವಶಕ್ಕೆ ಪಡೆದಿದ್ದಾರೆ, ಸ್ಥಳೀಯರು ಆರೋಪದ ಕುರಿತು ತನಿಖೆ ನಡೆಸೋದಾಗಿ ಭರವಸೆ ನೀಡಿದರು.

ಶ್ರೀ ಗಂಧ ಕಳ್ಳ ಅಂತಾದ್ರೆ ಕಡಿದಿರುವ ಶ್ರೀಗಂಧ ಎಲ್ಲಿದೆ..? ಇನ್ನೊಬ್ಬನನ್ನ ಎಲ್ಲಿ ಬಚ್ಚಿಟ್ಟಿದ್ದೀರಿ..? ಕಳ್ಳನಾಗಿದ್ರೆ ಕಾನೂನು ಕ್ರಮ ಕೈಗೊಳ್ಳದನ್ನ ಬಿಟ್ಟು ಯಾಕೆ ಕೊಂದ್ರಿ ಅನ್ನೋ ಪ್ರಶ್ನೆಗಳ ಸುರಿ ಮಳೆಯನ್ನೇ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಸುರಿಸಿದ್ದಾರೆ. ಶ್ರೀಗಂಧ ಕಳ್ಳತನಕ್ಕೆ ಆ ಗ್ಯಾಂಗ್ ಬಂದಿದೆ ಅಂತಾದ್ರೆ ಅದು ಅಪರಾಧ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಹೀಗೆ ವಶಕ್ಕೆ ಪಡೆದ ವ್ಯಕ್ತಿಯನ್ನ ಪೊಲೀಸರಿಗೆ ಒಪ್ಪಿಗೆ ಕಾನೂನು ಕ್ರಮ ಕೈಗೊಳ್ಳದನ್ನ ಬಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳೇ ಕಾನೂನನ್ನ ಕೈಗೆತ್ತಿಕೊಂಡಿದ್ದಾರ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.