ಕಾಡಾನೆ ಜೊತೆ selfi ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ ಅರಣ್ಯ ಇಲಾಖೆ ತಲಾ 10 ಸಾವಿರ ದಂಡ ವಿಧಿಸಿದ್ದು ಅರಣ್ಯ ಕಾನೂನುಗಳ ಸ್ಪಷ್ಟ ಅನುಷ್ಠಾನವಾಗಿದೆ.
ತೆಲಂಗಾಣ ನಿಜಾಂಪೇಟೆ ನಿವಾಸಿಗಳಾದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್(31) ಎಂಬವರು ಕಾಡಾನೆ ಜೊತೆ ಹುಡುಗಾಟವಾಡಲು ಹೋಗಿ ದಂಡ ತೆತ್ತಿದ್ದಾರೆ.
ಬುಧವಾರ ಸಂಜೆ ಈ ಇಬ್ಬರು ತಮ್ಮ ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಕೊಯಮತ್ತೂರಿಗೆ ತೆರಳುತ್ತಿದ್ದರು. ಈ ವೇಳೆ ಆಸನೂರು ಬಳಿ ರಸ್ತೆ ಬದಿಯಲ್ಲಿ ಕಾಡಾನೆ ನಿಂತಿದ್ದನ್ನು ಕಂಡಿದ್ದಾರೆ. ಕಾರಿನಿಂದ ಇಳಿದು ಕಾಡಾನೆ ಸಮೀಪ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ನೋಡಿ ಬಳಿ ಬಂದಿದ್ದಾರೆ. ವಿಚಾರಿಸಲೆಂದು ಬಳಿ ಬಂದಾಗ ಇಬ್ಬರೂ ಕಾರು ಹತ್ತಿ ಪರಾರಿಯಾಗಿದ್ದರು. ಕೂಡಲೇ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ರವಾನೆ ಮಾಡಿತ್ತು.

ಬಣ್ಣಾರಿ ಚೆಕ್ ಪೋಸ್ಟ್ ಬಳಿ ಕಾರ್ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ಅನ್ವಯ ಕಾರ್ ತಡೆಯಲಾಗಿದೆ. ನಿಷೇಧಿತ ಅರಣ್ಯ ಪ್ರದೇಶದೊಳಗಿನ ಹೆದ್ದಾರಿ ನಿಯಮಗಳ ಪಾಲನೆ ಮಾಡದೇ, ವನ್ಯಜೀವಿ ಜೊತೆ ಚೆಲ್ಲಾಟವಾಡಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸನೂರು ವಲಯ ಅರಣ್ಯಾಧಿಕಾರಿ ಪಾಂಡಿರಾಜನ್,’ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ್ಗೆ ಕಾಡಾನೆ ಕಾಣಿಸಿಕೊಳ್ಳುತ್ತದೆ. ವಾಹನ ಸವಾರರು ಆದಷ್ಟು ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಕೆಲವರು ಕೀಟಲೆ ಮಾಡಿ, ಫೋಟೋ ವಿಡಿಯೋ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ರೀತಿ ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ತೆಲಂಗಾಣದ ಇಬ್ಬರಿಗೆ ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ನಿಷೇಧ ಅರಣ್ಯ ಪ್ರದೇಶಗಳಿವೆಯೋ ಅಲ್ಲೆಲ್ಲಾ ಕಾನೂನು ಅನುಷ್ಠಾನ ಆಗಬೇಕು. ಆದರೆ ಇದರ ಪರಿವೆಯೇ ಅಧಿಕಾರಿಗಳಿಗಿಲ್ಲ.