Ode to the west wind

Join Us on WhatsApp

Connect Here

ಅಡಕೆ ಸಸಿ ಮಡಿಗಳ ಮಧ್ಯೆ ಚೆಂಡು ಹೂ ಬೇಸಾಯ: ಲಾಭದಾಯಕ.?

WhatsApp
Facebook
Twitter
LinkedIn

ಮಲೆನಾಡಿನಲ್ಲಿ ಸಾಕಷ್ಟು ಯುವಕರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಭಿನ್ನ ಪ್ರಯೋಗಗಳ ಮೂಲಕ ಪ್ರಗತಿಪರ ಕೃಷಿಕ ಎನಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಕೇಂದ್ರಕ್ಕೆ ಹೊಂದಿಕೊಂಡಂತೆ ಯಡೇಹಳ್ಳಿ ಎಂಬ ಗ್ರಾಮವಿದೆ. ಇಲ್ಲಿ ಮೂವತ್ತೇಳು ವರ್ಷದ ರಂಗನಾಥ್ ಬಿ ಎಆರ್ ಎಂಬುವರು ಕಳೆದ ನಾಲ್ಕೈದು ವರ್ಷಗಳಿಂದ ಅಡಕೆ ಹಾಗೂ ತೆಂಗಿನ ಸಸಿಗಳ ನರ್ಸರಿ ಮಾಡಿಕೊಂಡಿದ್ದಾರೆ. ಸುಮಾರು ಎರಡು ಲಕ್ಷ ಅಡಕೆ ಸಸಿಗಳಿರುವ ನರ್ಸರಿ ಈಗ ಜನರ ಆಕರ್ಷಣಾ ಕೇಂದ್ರವೂ ಆಗಿದೆ. ಕಾರಣ ರಂಗನಾಥ್ ಅಳವಡಿಸಿಕೊಂಡುರುವ ಮಿಶ್ರ ಬೆಳೆ ಬೇಸಾಯ ಪದ್ಧತಿ, ಅಡಕೆ ಮಡಿಗಳ ಮಧ್ಯೆ ಕಂಗೊಳಿಸುವ ಚೆಂಡು ಹೂವುಗಳು..!

ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೂ ಬೇಸಾಯ ಅಷ್ಟೇನೂ ಇಲ್ಲ. ಕಾರಣ ಇಲ್ಲಿನ ಹವಾಮಾನ  ಹೂ ಬೇಸಾಯಕ್ಕೆ ಪೂರಕವಾಗಿಲ್ಲ. ಆದರೆ ಶಿವಮೊಗ್ಗ ಜಿಲ್ಲೆ ಹಬ್ಬ-ಹರಿದಿನಗಳಲ್ಲಿ ಹೂವು ಮಾರಾಟಕ್ಕೆ ಬೃಹತ್ ಮಾರುಕಟ್ಟೆ ಒದಗಿಸುತ್ತೆ. ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳಿಂದ ಹೂ ತಂದು ದಲ್ಲಾಳಿಗಳು ಲಾಭ ಮಾಡಿಕೊಂಡು ಹೋಗುತ್ತಾರೆ. ಇದನ್ನ ಮನಗಂಡ ರಂಗನಾಥ್ ಅಡಕೆ ಮಡಿಗಳ ಮಧ್ಯೆ ಗೊಬ್ಬರ – ನೀರು ಪೂರೈಕೆಗೆ ಬಿಟ್ಟುಕೊಂಡಿದ್ದ ಕಿರು ಹಾದಿಗಳಲ್ಲೇ ಚೆಂಡು ಹೂವಿನ ಬೆಳೆ ಬೆಳೆದರು.

ಸುಮಾರು ಎರಡು ಸಾವಿರ ಬೀಜಗಳನ್ನ ಮಡಿಯಲ್ಲಿ ಸಸಿಯಾಗಿಸಿ, ಜುಲೈ ತಿಂಗಳ ಅಂತ್ಯಕ್ಕೆ  ನೆಟ್ಟರು. ಈ ಬೆಳೆ ಗೌರಿ ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿಯಲ್ಲಿ ಲಾಭ ತಂದಿತು. ಬುಡದಲ್ಲಿ ನೆಟ್ಟ ಎರಡನೇ ಹಂತದ ಗಿಡಗಳೂ ಸಹ ಈಗ‌ ಚಿಗುರಿಕೊಂಡಿವೆ. ಕಾರ್ತಿಕ ಮಾಸದಲ್ಲೂ ಹೂವಿನ ರಾಶಿ ಹೊಲದ ತುಂಬಾ ತುಂಬಿದೆ. ಮೂರು ತಿಂಗಳ ಬೆಳೆಯಾದ ಚೆಂಡು ಹೂವು ಮಿಶ್ರ ಬೆಳೆಯನ್ನಾಗಿ ಆಯ್ಕೆ ಮಾಡಿಕೊಂಡರೆ ಮಾತ್ರ ಲಾಭವಾಗುತ್ತೆ ಎಂಬ ಅನುಭವವನ್ನ ರಂಗನಾಥ್ ಹಂಚಿಕೊಂಡರು.

ರಂಗನಾಥ್ ಪ್ರಕಾರ ಚೆಂಡು ಹೂವಿನ ಬೇಸಾಯ ಮಲೆನಾಡಿನಲ್ಲಿ ನಷ್ಟದ ಬೆಳೆ. ಹೂವಿನ ಬೇಸಾಯಕ್ಕೆ ಜಾಗ ಮೀಸಲು ಇಡುವುದು ಸಮಂಜಸವಲ್ಲ.

‘ಸ್ಥಳೀಯ ತಳಿಗಳಿಂದ ಪೂರ್ಣ ಪ್ರಮಾಣದಲ್ಲಿ ಸಸಿ ಬರಿಸಲು ಸಾಧ್ಯವಿಲ್ಲ. ನಾನು ಇಂಡಸ್ ಕಂಪನಿಯ ಟೆನ್ನಿಸ್ ಬಾಲ್ ಎಂಬ  ಬೀಜಗಳನ್ನ ಮಡಿಯಲ್ಲಿ ಬೆಳೆಸಿ ನಾಟಿ ಮಾಡಿದೆ. ಹತ್ತು ದಿನಗಳಿಗೊಮ್ಮೆ ಗೊಬ್ಬರ ದ್ರವರೂಪದಲ್ಲಿ ಗಿಡಗಳಿಗೆ ಪೂರೈಕೆ ಮಾಡುತ್ತಿದ್ದೆ. ಆಗಾಗ ಸ್ವಲ್ಪ ಔಷಧೋಪಚಾರವೂ ಮಾಡಬೇಕು.  ಸುಮಾರು ಎರಡು ಸಾವಿರ ಗಿಡಗಳು ಅಡಕೆ ಸಸಿಗಳ ಮಧ್ಯೆ ನಮ್ಮ ನರ್ಸರಿಯಲ್ಲಿವೆ.  ಒಂದು ಗಿಡ ಸರಾಸರಿ 600 ಗ್ರಾಂ ಹೂವನ್ನ ಪ್ರತೀ ಕಟಾವಿಗೆ ನೀಡುತ್ತೆ. ಇಷ್ಟೂ ಗಿಡಗಳಿಂದ ಸುಮಾರು 12 ಕ್ವಿಂಟಾಲ್ ಹೂ ಸಿಗುತ್ತೆ. ಆರು ಕ್ವಿಂಟಾಲ್ ಹೂವು ಮಾರಾಟವಾದರೆ ಖರ್ಚು-ವೆಚ್ಚ ಕಳೆದು ಮೂವತ್ತು ಸಾವಿರ ಲಾಭ ಗಳಿಸಬಹುದು. ಸ್ಥಳೀಯ ಮಾರುಕಟ್ಟೆಯಲ್ಲೇ ಹೂ ಮಾರಾಟವಾಗುತ್ತೆ’ ಎನ್ನುತ್ತಾರೆ ರಂಗನಾಥ್.

ಹೂ ಬೇಸಾಯ ಹಿಂದೂ- ಹಬ್ಬಗಳನ್ನ ಎದುರಿಟ್ಟುಕೊಂಡು ಮಾಡಬೇಕು. ಕಾರ್ತಿಕ ಮಾಸ ಮುಗಿದ ನಂತರ ಬೇಡಿಕೆ ಇಳಿಮುಖವಾಗುತ್ತೆ. ಡೆಕೋರೇಷೆನ್ ಹಾಗೂ ಸಣ್ಣಪುಟ್ಟ ಪೂಜೆ ಪುನಸ್ಕಾರಗಳಿಗೆ ಮಾತ್ರ ಮಾರಾಟವಾಗುತ್ತೆ. ಚೆಂಡು ಹೂವನ್ನ ಮಿಶ್ರ ಬೇಸಾಯ ಪದ್ಧತಿಯಲ್ಲಿ ಅಳವಡಿಸಿಕೊಂಡರೆ
ಲಾಭ. ಜೊತೆಗೆ ಅಡಕೆ ತೋಟ ಅಥವಾ ಸಸಿ ಮಡಿಗಳ ನಡುವೆ ಚೆಂಡು ಹೂವು ಕೀಟ ನಿಯಂತ್ರಕದಂತೆಯೂ ಕೆಲಸ ಮಾಡುತ್ತೆ ಎಂಬುದು ತಜ್ಞರ ಅಭಿಪ್ರಾಯ.

ವಿಡಿಯೋ:

You Might Also Like This